ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ದಿಢೀರ್ ಆಗಿ ಏರಿಕೆಯಾಗುತ್ತಿದ್ದರೆ ಮತ್ತೊಂದು ಕಡೆ ಓಮಿಕ್ರಾನ್ ಸಹ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ 10 ದಿನಗಳ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಆದರೂ ಕರ್ನಾಟಕದಲ್ಲಿ ಸತತ ಎರಡು ದಿನಗಳಿಂದ ದೈನಂದಿನ ಸೋಂಕು 1 ಸಾವಿರ ದಾಟಿದೆ. ಹೀಗಾಗಿ ಕೊರೊನಾ ಸೋಂಕು ಏರುವುದು ಹೀಗೆ ಮುಂದುವರಿದರೆ ಮತ್ತೊಮ್ಮೆ ಕರ್ನಾಟಕ ಲಾಕ್ಡೌನ್ ಜಾರಿಯಾಗುತ್ತದೆಯೇ ಎಂಬುದು ಮುಂದಿರುವ ಪ್ರಶ್ನೆ. ಯಾಕೆಂದರೆ ಕೋವಿಡ್ ಪ್ರಕರಣಗಳು ಹೆಚ್ಚಾಗುವುದು ಮುಂದುವರಿದರೆ ಅಪಾಯಕಾರಿ ಮಟ್ಟಕ್ಕೆ ತಲುಪುವುದನ್ನು ತಡೆಯಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕಠೀಣ ನಿರ್ಬಂಧಗಳನ್ನು ಶಿಫಾರಸು ಮಾಡಿದೆ.
ಈ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದ್ದು, ವರದಿಯಲ್ಲಿ ಲಾಕ್ ಡೌನ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ವಿಸ್ತೃತ ವರದಿ ನೀಡಿದ್ದು, ಈ ವರದಿಯಲ್ಲಿ ಲಾಕ್ಡೌನ್ ಪ್ರಸ್ತಾಪವೂ ಇದೆ. ವರದಿಯಲ್ಲಿ ಯಾವಾಗ ಲಾಕ್ಡೌನ್ ಸೂಕ್ತ ಎಂಬ ಅಂಶಗಳ ಬಗ್ಗೆಯೂ ತಾಂತ್ರಿಕ ಸಲಹಾ ಸಮಿತಿ ವರದಿ ತಿಳಿಸಿದ್ದು, ಅದರಲ್ಲಿ ಒಂದು ರಾಜ್ಯದ ವಾರದ ಪಾಸಿಟಿವಿಟಿ ದರ ಶೇ.5ಕ್ಕಿಂತ ಜಾಸ್ತಿ ಆದಾಗ ಲಾಕ್ ಡೌನ್ ಅನಿವಾರ್ಯ ಆಗಬಹುದು ಎಂದು ಹೇಳಿದೆ. ಎರಡನೇಯದಾಗಿ ರಾಜ್ಯದ ಒಟ್ಟಾರೆ ಐಸಿಯು (ICU) ಹಾಗೂ ಆಕ್ಸಿಜನ್ ಬೆಡ್ಗಳಲ್ಲಿ ಶೇ.40 ಬೆಡ್ ರೋಗಿಗಳಿಂದ ತುಂಬಿದರೆ ಲಾಕ್ಡೌನ್ ಮಾಡಿ ಎಂದು ಸರ್ಕಾರಕ್ಕೆ ಸಮಿತಿ ಸಲಹೆ ನೀಡಿದೆ. ಅಲ್ಲದೆ ಈ ಹಂತಕ್ಕೆ ಹೋಗಬಾರದು ಅಂದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಜನ ನಿರ್ಬಂಧಗಳಿಗೆ ಸಿದ್ಧರಾಗಬೇಕಿದೆ. ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಕಲರ್ ಕೋಡ್ ಆಧಾರದ ನಿರ್ಬಂಧ…
ಯಲ್ಲೋ ಅಲರ್ಟ್, ಆರೆಂಜ್ ಅಲರ್ಟ್ ಹಾಗೂ ರೆಡ್ ಅಲರ್ಟ್ ಘೋಷಣೆಯಾದರೆ ಅದಕ್ಕೆ ಸಂಬಂಧಪಟ್ಟ ಹಂತದ ನಿರ್ಬಂಧಗಳು ಜಾರಿಯಾಗಲಿವೆ. ಯೆಲ್ಲೋ, ಆರೆಂಜ್, ರೆಡ್ ಕಲರ್ ಕೋಡ್ ಅನ್ನು ಕೋವಿಡ್ ಹರಡುವುದರ ಮೇಲೆ ವಿಂಗಡಿಸಲಾಗಿದೆ. ಸೋಂಕಿನ ದರ ಶೇ.1 ಅಥವಾ ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್, 1ರಿಂದ 2% ಇದ್ದರೆ ಆರೆಂಜ್ ಹಾಗೂ 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಎಂದು ಸೂಚಿಸಿ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಲು ಸೂಚಿಸಲಾಗಿದೆ.
ಯೆಲ್ಲೋ ಅಲರ್ಟ್ ಇದ್ದಾಗ ಕಡ್ಡಾಯವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು, ಒಂದು ಮೀಟರ್ ಅಂತರ, ಸ್ಯಾನಿಟೈಸ್ ಅನ್ನ ಜಾರಿಗೊಳಿಸುವುದು. ಇತರೆ ಚಟುವಟಿಕೆಗಳಾದ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಸಿನಿಮಾ, ಆಡಿಟೋರಿಯಂ, ಸ್ಕೂಲ್- ಕಾಲೇಜ್, ರೆಸ್ಟೋರೆಂಟ್ ಸೇರಿದಂತೆ ಸಲೂನ್, ಜಿಮ್ ಸೆಂಟರ್ ಆರಂಭ ಮಾಡಬಹುದು. ಆದರೆ, ಮದುವೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ 200- 300 ಜನರಿಗೆ ಸೀಮಿತಗೊಳಿಸಬೇಕು. ಅಂತ್ಯಕ್ರಿಯೆ ಸಂದರ್ಭದಲ್ಲಿ 100- 200 ಮಂದಿ ಸೇರಲು ಮಾತ್ರ ಅವಕಾಶ ಕಲ್ಪಿಸಬೇಕು.
ಆರೆಂಜ್ ಅಲರ್ಟ್ ಇದ್ದರೆ ಎಚ್ಚರಿಕೆ ಗಂಟೆ ಎಂದು ಭಾವಿಸಬೇಕು. ಇದರಲ್ಲಿ ಮಾಲ್ ಶಾಪಿಂಗ್ ಕಾಂಪ್ಲೆಕ್ಸ್ಗೆ ಜನ ಸಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 1ರ ತನಕ ಅವಕಾಶ ಕಲ್ಪಿಸಬೇಕು.. ಸಿನಿಮಾ ಹಾಗೂ ಆಡಿಟೋರಿಯಂನಲ್ಲಿ, ಶಾಲಾ- ಕಾಲೇಜು, ಬಾರ್ ಅಂಡ್ ಪಬ್, ಕಚೇರಿಗಳಲ್ಲಿ 50- 50 ಸೂತ್ರ ಜಾರಿ ಮಾಡಬೇಕು. ಸಭೆ- ಸಮಾರಂಭದಲ್ಲಿ ಜನ ಕಡಿಮೆ ಸೇರುವುದನ್ನು ಜಾರಿ ಮಾಡಬೇಕು ಎಂದು ಸೂಚಿಸಲಾಗಿದೆ.
ಪರಿಸ್ಥಿತಿ ರೆಡ್ ಅಲರ್ಟ್ಗೆ ತಲುಪಿದರೆ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತೆ ಸೂಚಿಸಲಾಗಿದೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಹಾಗೂ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವುದು ಸೇರಿದಂತೆ ಇತರೆ ನಿರ್ಬಂಧಗಳನ್ನು ಜಾರಿ ಮಾಡಲು ಸೂಚಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ