2 ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ 66 ಮಂದಿಗೆ ಕೊರೋನಾ ಸೋಂಕು; ಪೂರ್ಣ ಹಡಗು ಐಸೋಲೇಟ್​ !

ಮುಂಬೈ: 2000ಕ್ಕೂ ಅಧಿಕ ಪ್ರಯಾಣಿಕರು ಇದ್ದ ಮುಂಬೈ-ಗೋವಾ ಐಷಾರಾಮಿ ಕ್ರೂಸ್​ ಹಡಗಿನಲ್ಲಿ ಒಬ್ಬ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಳಿದ ಪ್ರಯಾಣಿಕರನ್ನು ಅಲ್ಲಿಯೇ ಐಸೋಲೇಟ್ ಮಾಡಿ, ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್ ಮಾಡಲಾಗುತ್ತಿದೆ. ಅದರ ವರದಿಯೂ ಬರುತ್ತಿದ್ದು, ಸದ್ಯ ಈ ಕಾರ್ಡೆಲಿಯಾ ಕ್ರೂಸಸ್​ ಐಷಾರಾಮಿ ಹಡಗಿನಲ್ಲಿ 66 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಒಬ್ಬರಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡ ನಂತರ, ಯಾರಿಗೂ ಹಡಗಿನಿಂದ ಹೊರ ಹೋಗಲು ಬಿಟ್ಟಿರಲಿಲ್ಲ. ವೈದ್ಯಕೀಯ ತಂಡ ಅಲ್ಲಿಯೇ ಇದ್ದುಕೊಂಡು ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್ ಮಾಡುತ್ತಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ತಿಳಿಸಿದ್ದಾರೆ.
ಹಡಗಿನಲ್ಲಿದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ, ಈ ಐಷಾರಾಮಿ ಹಡಗನ್ನು ಗೋವಾದಲ್ಲಿ ನಿಲ್ಲಿಸಲು ಮುಂಬೈ ಪೋರ್ಟ್​ ಟ್ರಸ್ಟ್​ ನಿರಾಕರಿಸಿದೆ. ಹಾಗಾಗಿ ಈಗ ಹಡಗು ಮರ್ಮಾಗೋವ್​ ಪೋರ್ಟ್​ ಕ್ರೂಸ್​ ಟರ್ಮಿನಲ್​ನಲ್ಲಿ ನಿಂತಿದೆ. ಪ್ರತಿಯೊಬ್ಬರಿಗೂ ಕೊವಿಡ್​ 19 ಟೆಸ್ಟ್​ ಮುಗಿದು, ರಿಪೋರ್ಟ್​ ಬಂದ ಬಳಿಕವಷ್ಟೇ ಅಲ್ಲಿಂದ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ. ವೈದ್ಯಕೀಯ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಯೊಂದರ ಜತೆ ಟೈ-ಅಪ್ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡಿ ಒಟ್ಟು 66 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದನ್ನು ತಿಳಿಸಿದ್ದಾರೆ. ಪ್ರಯಾಣಿಕರನ್ನು ಹಡಗಿನಿಂದ ಯಾವಾಗ ಕಳುಹಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ಹಡಗಿನಲ್ಲಿ ಇದ್ದವರೆಲ್ಲ ಎರಡೂ ಡೋಸ್​ ಕೊರೊನಾ ಲಸಿಕೆ ಪಡೆದವರಾಗಿದ್ದಾರೆ. ಹಾಗಿದ್ದಾಗ್ಯೂ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬೇರೆಬೇರೆ ದೇಶಗಳಿಂದ ಬರುವ ಸುಮಾರು 4000ದಷ್ಟು ಪ್ರಯಾಣಿಕರನ್ನು ಪ್ರತಿದಿನ ಕೊವಿಡ್​ 19 ತಪಾಸಣೆಗೆ ಒಳಪಡಿಸಲಾಗುತ್ತಿದೆ. ಓಮಿಕ್ರಾನ್​ ಟೆಸ್ಟ್​ ಮಾಡುವುದಕ್ಕೋಸ್ಕರ ಗೋವಾ ಇನ್ನು 15 ದಿನಗಳಲ್ಲಿ ಜಿನೋಮ್​ ಸಿಕ್ವೆನ್ಸಿಂಗ್​ ಯಂತ್ರವನ್ನು ಸಿದ್ಧಗೊಳಿಸಲಿದೆ. ಇದರಿಂದ ಓಮಿಕ್ರಾನ್​ ಟೆಸ್ಟ್​ ವಿಳಂಬ ತಪ್ಪಿಸಬಹುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಓದಿರಿ :-   ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೆ ತನ್ನಿ: ಪ್ರಧಾನಿ ಮೋದಿಗೆ ರಾಜ್ ಠಾಕ್ರೆ ಒತ್ತಾಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ