ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಒಂಭತ್ತು ವರ್ಷದ ಓಲಿವರ್ ಹೆಸರಿನ ಹುಲಿಯೊಂದು ಸೋಮವಾರ ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ ಎಂದು ವರದಿಯಾಗಿದೆ.
ಸಧೃಡವಾಗಿ ಆರೋಗ್ಯವಾಗಿದ್ದ ಓಲಿವರ್ ಹುಲಿಯು ಮಧ್ಯಾಹ್ನವರೆಗೂ ಚುರುಕಾಗಿತ್ತು. ಆದರೆ ನಂತರದಲ್ಲಿ ಅದರ ಪಂಜರ ಶುಚಿ ಮಾಡುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ, ಅದರ ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಫಲಪ್ರದವಾಗಿಲ್ಲ. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ವಿಬಿಗೆ ಹಾಗೂ ಉತ್ತರ ಪ್ರದೇಶದ ಐವಿಆರ್ಐಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ.
ಕೋವಿಡ್ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ ನಿಹ್ಸಾದ್ಗೆ ಕಳುಹಿಸಲಾಗಿದೆ. ಈ ಹುಲಿಯು ಪಿಲಿಕುಲದ ವಿಕ್ರಮ ಮತ್ತು ಶಾಂಭವಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದು. ಪಿಲಿಕುಳದಲ್ಲಿ ಈಗ 12 ಹುಲಿಗಳು ಇವೆ. ಮೃಗಾಲಯದಲ್ಲಿ ಅನುಮಾನಾಸ್ಪದ ಯಾವುದೇ ರೋಗವು ಹರಡದಂತೆ ರೋಗ ನಿರೋಧಕ ದ್ರಾವಣವನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತ ಮುತ್ತ ಸಿಂಪಡಿಸಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ