ಕಲಬುರಗಿ: ಕರ್ನಾಟಕದಲ್ಲಿ ಒಂದು ವಾರದಿಂದ ಕೋವಿಡ್ ಮತ್ತು ಓಮಿಕ್ರಾನ್ ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನು ತಡೆಯಲು ಸುದಿರ್ಘ ಕ್ರಮ ಕೈಗೊಳ್ಳಬೇಕಾಗಿದೆ. ಔಷದಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತಜ್ಞರನ್ನು ಕೇಳಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಗೆ ಮಾತನಾಡಿದ ಅವರು, ಇಂದು ಸಂಜೆ ಕೋವಿಡ್ ಬಗ್ಗೆ ಸಭೆ ಮಾಡುತ್ತಿದ್ದೇವೆ. ಸಭೆಯಲ್ಲಿ ಕೋವಿಡ್ ಟಾಸ್ಕಪೋರ್ಸ್ ಸಮಿತಿ ಸದಸ್ಯರಿರುತ್ತಾರೆ. ಅವರ ಜೊತೆ ಸಮಗ್ರವಾಗಿ ಚರ್ಚಿಸಿ ಅವರು ನೀಡುವ ಸಲಹೆಗಳ ಆಧಾರದ ಮೇಲೆ ಲಾಕ್ ಡೌನ್, ಸೆಮಿ ಲಾಕ್ ಡೌನ್ ಮಾಡಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ಕೋವಿಡ್ ಮತ್ತೆ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ ಅನೇಕ ಮಾರ್ಗಸೂಚಿಗಳನ್ನು ನೀಡಿದೆ ಎಂದ ಅವರು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ ವಹಿಸಬೇಕಿದೆ. ಗಡಿಗಳನ್ನು ಬಿಗಿ ಮಾಡಲಾಗಿದೆ. ಇನ್ನಷ್ಟು ಕಟ್ಟೆಚ್ಚರ ವಹಿಸುವ ಅವಶ್ಯಕತೆ ಇದೆ.ಕೋವಿಡ್ ನಿಯಂತ್ರಣದಲ್ಲಿ ಜನರ ಸಹಕಾರ ಕೂಡ ಅಗತ್ಯ. ಜನ ಸಹಕಾರ ನೀಡಿದ್ರೆ ಕೊವಿಡ್ ನಿಯಂತ್ರಣ ಮಾಡಬಹುದು. ಗಡಿಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದರು.
ರಾಮನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವಥ್ ನಾರಾಯಣ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಕರ್ನಾಟಕದ ಸಂಸ್ಕೃತಿ ಅಲ್ಲ, ಮಾತಿನಿಂದ ನಮ್ಮ ವಿಚಾರ ಹೇಳಬಹುದು. ಆದರೆ ಈ ರೀತಿ ವರ್ತನೆ ಸರಿಯಲ್ಲ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ