ಪ್ರಧಾನಿ ಭದ್ರತೆ ಲೋಪವಾದ ಸ್ಥಳದ ಸಮೀಪದಲ್ಲಿ ಪಾಕ್ ದೋಣಿ ಪತ್ತೆ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪ ನಡೆದಿದ್ದ ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಗಡಿಭಾಗದ ಔಟ್‍ಪೋಸ್ಟ್ ಬಳಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಅದನ್ನು ಬಿಎಸ್‍ಎಫ್ ವಶಕ್ಕೆ ಪಡೆದುಕೊಂಡಿದೆ.
ಗಡಿಯಲ್ಲಿರುವ ಟಿಡಿ ಮಾಲ್ ಔಟ್‍ಪೋಸ್ಟ್ ಬಳಿ ಬಿಎಸ್‍ಎಫ್‍ನ 136ನೆ ಬೆಟಾಲಿಯನ್‍ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮರದ ದೋಣಿ ಗಮನಿಸಿ ಅದನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್‍ಎಫ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಸಿಕ್ಕಿಬಿದ್ದ ಸ್ಥಳದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನದ ದೋಣಿಯನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳುವ ಸಮಯದಲ್ಲಿ ದೋಣಿ ಖಾಲಿಯಾಗಿತ್ತು.
ದೋಣಿಯನ್ನು ವಶಕ್ಕೆ ಪಡೆದ ನಂತರ ಯಾವುದೇ ಅನುಮಾನಾಸ್ಪದವಾದ ಚಟುವಟಿಕೆ ಕಂಡರೆ ಬಿಎಸ್‍ಎಫ್‍ಗೆ ಮಾಹಿತಿ ನೀಡುವಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.
ಫಿರೋಜ್‍ಪುರ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಂಜಾಬ್ ರಾಜ್ಯದ ಜಿಲ್ಲೆಯಾಗಿದ್ದು, ಭದ್ರತೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಈ ಮೊದಲು ಪಾಕಿಸ್ತಾನದ ಹಲವು ಡ್ರೋಣ್‍ಗಳು ಈ ಜಿಲ್ಲೆಯಲ್ಲಿ ಹಾರಾಡಿದೆ. ಬಿಎಸ್‍ಎಫ್ ಯೋಧರು ಹಲವು ಬಾರಿ ಈ ಡ್ರೋಣ್‍ಗಳನ್ನು ಹೊಡೆದುರುಳಿಸಿದ್ದರು.
ಸಾಮಾನ್ಯವಾಗಿ ಶಸ್ತ್ರಗಳನ್ನು ಮತ್ತು ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡಲು ಇಂತಹ ಬೋಟ್‍ಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ