ಎರಡು ಡೋಸ್ ಲಸಿಕೆ ಪಡೆದವರಿಗೆ ಗ್ರೀನ್ ಪಾಸ್ ಕೊಡಲು ಸರ್ಕಾರದ ಚಿಂತನೆ: ಸಚಿವ ಡಾ.ಸುಧಾಕರ

ಬೆಂಗಳೂರು: ಕೊರೊನಾದ ಸಂಭವನೀಯ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಹಲವು ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲಾ ಅಧಿಕಾರಿಗಳ ಸಮನ್ವಯದ ಕುರಿತು ಸಭೆ ಮಾಡಲಾಗಿದೆ. ಕಳೆದ ಎರಡು ಅಲೆಗಳ ವೇಳೆ ಅನುಭವ ಪಡೆದ ಅಧಿಕಾರಿಗಳು ಈ ಬಾರಿ ಯಾವುದೇ ಲೋಪ ಆಗದಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದವರಿಗೆ ಗ್ರೀನ್‌ ಪಾಸ್‌ ಅಥವಾ ಯೂನಿವರ್ಸಲ್‌ ಪಾಸ್‌ ಕೊಡುವ ಚಿಂತನೆ ನಡೆದಿದೆ ಎಂದು ಸಚಿವರು, ಬಸ್‌ಗಳಲ್ಲಿ ಪ್ರಯಾಣ ಅಥವಾ ಹೊಟೇಲ್‌, ರೆಸ್ಟೋರೆಂಟ್‌ ಪ್ರವೇಶ ಹಾಗೂ ಮಾಲ್‌ ಹಾಗೂ ಇತರ ಸ್ಥಳಗಳಲ್ಲಿ ಅನುಮತಿಗಳಿಗಾಗಿ ಈ ಪಾಸ್‌ಗಳು ಮುಖ್ಯವಾಗಲಿವೆ ಎಂದು ಹೇಳಿದ್ದಾರೆ.
ವಿದೇಶದಿಂದ ಮತ್ತು ಹೊರ ರಾಜ್ಯದಿಂದ ಬರುವವರ ಬಗ್ಗೆ ನಿಗಾ ಇಡಲಾಗುತ್ತದೆ. ರೈಲಿನ ಮೂಲಕ ಹೊರ ರಾಜ್ಯದಿಂದ ಬರುವವರ ಬಗ್ಗೆ ಕೂಡ ಏರ್ ಸುವಿಧಾ ರೀತಿಯಲ್ಲಿ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ನೆಗೆಟಿವ್ ವರದಿ ಇರಬೇಕು. ಮುಖ್ಯಮಂತ್ರಿಗಳ ಮೂಲಕ ಪತ್ರ ಬರೆದು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು. ಗಡಿಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ನಡೆಯಲಿದೆ ಎಂದು ಹೇಳಿದರು.
ಬಿಬಿಎಂಪಿ ವಲಯದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಬಿಬಿಎಂಪಿಯ 8 ವಲಯಗಳಿಗೆ ಕಮಾಂಡ್ ಸೆಂಟರ್ ಮಾಡಲಾಗುವುದು. ಯಾವುದೇ ವ್ಯಕ್ತಿಗೆ ಪಾಸಿಟಿವ್ ಬಂದಾಗ, ಸೋಂಕಿತರಿಗೆ ಕರೆ ಮಾಡಲಾಗುವುದು.
ಮುಂದಿನ ಏಳು ದಿನ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಟೆಲಿ ಕೌನ್ಸೆಲಿಂಗ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 10 ಸಾವಿರ ಗೃಹ ವೈದ್ಯರ ನಿಯೋಜನೆ ಮಾಡಲಾಗಿದೆ. ಕೋವಿಡ್‌ ಪಾಸಿಟಿವ್ ಬಂದಾಗ, ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವುದು ಬೇಡ. ಯಾರು ಆಸ್ಪತ್ರೆಗೆ ಸೇರಬೇಕು ಎಂಬ ಬಗ್ಗೆ ಡಾ.ರವಿ ಅವರ ತಜ್ಞರ ಸಮಿತಿ ತಿಳಿಸಲಿದೆ. ಮಾರ್ಗಸೂಚಿ, ದಾಖಲು ನೀತಿ ಪ್ರಕಾರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement