ಜಾನುವಾರುಗಳ ಅಕ್ರಮ ಸಾಗಣೆ ತಡೆಯಲು ಹೋದ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ; 12 ಪೊಲೀಸ್​ ಸಿಬ್ಬಂದಿಗೆ ಗಾಯ

ನವದೆಹಲಿ: ಶನಿವಾರ ರಾತ್ರಿ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪ್ರದೇಶದಲ್ಲಿ ಜಾನುವಾರು ಕಳ್ಳಸಾಗಣೆದಾರರು ನಡೆಸಿದ ದಾಳಿಯಲ್ಲಿ ಕನಿಷ್ಠ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಕೂಚ್ ಬೆಹಾರ್‌ನ ಮೆಖಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತ-ಬಾಂಗ್ಲಾದೇಶ ಗಡಿಯ ಬಳಿ ಈ ಘಟನೆ ನಡೆದಿದೆ. ಜಾನುವಾರು ಕಳ್ಳಸಾಗಣೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಗಡಿ ದಾಟಲು ಜಮಾಯಿಸಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ದಾಳಿ ನಡೆಸಿದಾಗ ಮಹಿಳೆ ಸೇರಿದಂತೆ ಕಳ್ಳಸಾಗಾಣಿಕೆದಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಆಪಾದಿತ ಕಳ್ಳಸಾಗಾಣಿಕೆದಾರರಲ್ಲಿ ಕೆಲವು ಮಹಿಳೆಯರೂ ಇದ್ದರು, ಅವರು ಮೊದಲು ಪೊಲೀಸರ ಮೇಲೆ ಕಲ್ಲು ತೂರಿದರು ಮತ್ತು ನಂತರ ಬಿದಿರಿನ ಕೋಲುಗಳಿಂದ ಹಲ್ಲೆ ನಡೆಸಿದರು. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮೇಖಲಿಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿ ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಕ್ರಮ ಸಾಗಣೆದಾರರು ಗಡಿಯಾಚೆ ಸಾಗಿಸುತ್ತಿದ್ದ 34 ಜಾನುವಾರುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಳೆದ ರಾತ್ರಿ ಮಾಲ್ಡಾದಿಂದ ಇಬ್ಬರು ಜಾನುವಾರು ಕಳ್ಳಸಾಗಣೆದಾರರನ್ನು ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಬಂಧಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ