ಮಲಯಾಳಂ ನಟಿ ಅಪಹರಣ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ನಟ ದಿಲೀಪ್ ವಿರುದ್ಧ ಎಫ್‌ಐಆರ್ ದಾಖಲು

ಕೇರಳ: 2017ರ ಮಲಯಾಳಂ ನಟಿ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೇರಳ ಪೊಲೀಸರ ಅಪರಾಧ ವಿಭಾಗವು ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿದೆ.
ದಿಲೀಪ್ ಮತ್ತು ಆತನ ಜನರು ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಬಾಲಚಂದ್ರ ಕುಮಾರ್ ಸ್ಫೋಟಕ ಮಾಹಿತಿ ಬಿಡುಗಡೆ ಮಾಡಿದ ಬೆನ್ನಲ್ಲೇ ಇದು ನಡೆದಿದೆ.
ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಕೇಸ್
ಇತ್ತೀಚೆಗೆ, ನಿರ್ದೇಶಕ ಬಾಲಚಂದ್ರ ಕುಮಾರ್ ಅವರು 2017ರ ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೆಲವು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳಿಕೆ ನೀಡಿದ ನಂತರ, ಹಲವಾರು ಆಡಿಯೊ ತುಣುಕುಗಳು ಹೊರಬಂದವು. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನಟ ಮತ್ತು ಅವರ ತಂಡ ಬೆದರಿಕೆ ಹಾಕಿರುವುದನ್ನು ಆಡಿಯೊ ಕ್ಲಿಪ್‌ಗಳು ಬಹಿರಂಗಪಡಿಸುತ್ತವೆ.
ಪಿತೂರಿ ಮತ್ತು ಬೆದರಿಕೆ ಹಾಕಿದ್ದಕ್ಕಾಗಿ ದಿಲೀಪ್ ಮತ್ತು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಲಯಾಳಂ ನಟ ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ಅವರ ಸಹೋದರ ಅನೂಪ್ ಮತ್ತು ಸೋದರ ಮಾವ ಕ್ರಮವಾಗಿ ಎರಡನೇ (ಎ2) ಮತ್ತು ಮೂರನೇ (ಎ3) ಆರೋಪಿಗಳಾಗಿದ್ದಾರೆ. ಎಫ್‌ಐಆರ್‌ನಲ್ಲಿ ಬಾಬು ಚೆಮಾಂಗನಾಡ್, ಅಪ್ಪು ಮತ್ತು ಅಪರಿಚಿತ ವ್ಯಕ್ತಿಯನ್ನು ಹೆಸರಿಸಲಾಗಿದೆ.
ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಹೇಳಿಕೆಯ ಪ್ರಕಾರ, ದಿಲೀಪ್ ಮತ್ತು ಅವರ ಜನರು ತನಿಖಾ ಅಧಿಕಾರಿಗಳ ಜೀವಕ್ಕೆ ಅಪಾಯವನ್ನುಂಟು ಮಾಡಲು ಪ್ರಯತ್ನಿಸಿದರು.
2017ರಲ್ಲಿ ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಮಲಯಾಳಂ ನಟ ದಿಲೀಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದು, ಹಲವು ವಾರಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.
ಐದು ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ಜನವರಿ 5 ರಂದು, ಕೇರಳ ಸರ್ಕಾರವು ಆರು ತಿಂಗಳ ಕಾಲ ವಿಸ್ತರಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ