ಉತ್ತರ ಪ್ರದೇಶ: ಮತ್ತೊಬ್ಬ ಸಚಿವ ಧರಂ ಸಿಂಗ್ ಸೈನಿ ರಾಜೀನಾಮೆ, ಮೂರು ದಿನದಲ್ಲಿ ಮೂವರು ಸಚಿವರ ಕಳೆದುಕೊಂಡ ಬಿಜೆಪಿ..!

ಲಕ್ನೋ: ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಒಂಬತ್ತನೇ ಶಾಸಕ ಹಾಗೂ ಮೂರನೇ ಸಚಿವರಾಗಿದ್ದಾರೆ.
ಹಿಂದಿನ ದಿನ, ಧರಂ ಸಿಂಗ್ ಸೈನಿ ಅವರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ ಭದ್ರತೆ ಮತ್ತು ತಮಗೆ ನೀಡಿದ್ದ ನಿವಾಸವನ್ನು ವಾಪಸ್‌ ಮಾಡಿದ್ದರು.
ಧರಂ ಸಿಂಗ್ ಸೈನಿ ಅವರು ರಾಜ್ಯ (ಸ್ವತಂತ್ರ ಉಸ್ತುವಾರಿ), ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದಾರೆ.
ಬಿಜೆಪಿಯ ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯರಿಂದ ಆರಂಭಗೊಂಡ ರಾಜೀನಾಮೆ ಪರ್ವ ಮುಂದುವರಿದಿದೆ. ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಮೌರ್ಯ ಹೇಳಿದ್ದರು.
ನಂತರದ ದಿನಗಳಲ್ಲಿ, ಹಲವಾರು ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಶಾಕ್ಯಾ ಸೇರಿದಂತೆ ಇತರರು ಪಕ್ಷವನ್ನು ತೊರೆದರು.
ಒಬಿಸಿ ನಾಯಕ ದಾರಾ ಸಿಂಗ್ ಚೌಹಾಣ್ ಬುಧವಾರ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದು, ಸಮಾಜವಾದಿ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ತಾನು ಸಮರ್ಪಣಾ ಭಾವದಿಂದ ದುಡಿದಿದ್ದೇನೆ ಆದರೆ ದಲಿತರು, ಒಬಿಸಿಗಳು ಮತ್ತು ನಿರುದ್ಯೋಗಿಗಳಿಗೆ ಬಿಜೆಪಿ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ ಎಂದು ಚೌಹಾಣ್ ರಾಜೀನಾಮೆ ನಂತರ ಹೇಳಿದ್ದಾರೆ.
ಇಂದು, ಗುರುವಾರ ರಾಜೀನಾಮೆ ನೀಡಿರುವ ಸಚಿವ ಧರಂ ಸಿಂಗ್ ಸೈನಿ ಅವರು ಸ್ವಾಮಿ ಪ್ರಸಾದ್ ಮೌರ್ಯ ಅವರ ಆಪ್ತ ಎಂದು ಹೇಳಲಾಗುತ್ತದೆ.
ಇದಕ್ಕೂ ಮೊದಲು, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನಿಂದ ಪ್ರತಿದಿನ ಒಂದರಿಂದ ಇಬ್ಬರು ಸಚಿವರು ಹೊರಬರುತ್ತಾರೆ ಮತ್ತು ಜನವರಿ 20 ರ ವೇಳೆಗೆ ಈ ಸಂಖ್ಯೆ 18 ಕ್ಕೆ ಏರುತ್ತದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ಫೋರ್ಬ್ಸ್‌ನ 2023ರ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement