ಕೋಝಿಕೋಡ್: ಆಳ ಸಮುದ್ರದಲ್ಲಿ ಜೀವನ್ಮರಣಗಳ ಮಧ್ಯೆ ಹೋರಾಡಿ ಕೊನೆಗೂ ಸಾವನ್ನು ಗೆಲ್ಲುವಲ್ಲಿ ಎಮ್ಮೆ ಯಶಸ್ವಿಯಾಗಿದೆ. ಇದರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರು ಮೀನುಗಾರರು.
ಕೋಝಿಕೋಡ್‌ನ ಕೋಠಿಯಿಂದ ಸಮುದ್ರಕ್ಕೆ ಇಳಿದಿದ್ದ ಮೂವರು ಮೀನುಗಾರರು ಗುರುವಾರ ಮಧ್ಯರಾತ್ರಿ 1 ಗಂಟೆಗೆ ಅಸಾಮಾನ್ಯ ದೃಶ್ಯವನ್ನು ನೋಡಿದ್ದಾರೆ. ಸಮುದ್ರ ತೀರದಿಂದ ಸುಮಾರು ಎಂಟು ಕಿಲೋಮೀಟರ್ ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದಾಗ ರಾತ್ರಿ ಸಮಯದಲ್ಲಿ ಅವರು ಏನೋ ತೇಲುತ್ತಿರುವುದನ್ನು ಗುರುತಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಅದು ಅಸಹಾಯಕ ಎಮ್ಮೆ ಎಂದು ಅವರಿಗೆ ಕಂಡುಬಂದಿದೆ.
ಸತತ ಪ್ರಯತ್ನದ ನಂತರ ಮೀನುಗಾರರು ಎಮ್ಮೆಯನ್ನು ರಕ್ಷಿಸಿ ದಡಕ್ಕೆ ತಂದು ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ. ಬದುಕಿದೆಯಾ ಬಡ ಜೀವ ಎಂಬಂತೆ ಎಮ್ಮೆಯೂ ನಿಟ್ಟುಸಿರುಬಿಟ್ಟಿದೆ.
ರಾತ್ರಿ ಸಮಯ, ನಾವು ಸಮುದ್ರದಿಂದ ವಿಚಿತ್ರವಾದ ಶಬ್ದವನ್ನು ಕೇಳಿದಾಗ, ಟಾರ್ಚ್ ಬಳಸಿ ಸುತ್ತಲೂ ನೋಡಿದೆವು. ಆಗ ತೇಲುತ್ತಿರುವ ಎಮ್ಮೆಯನ್ನು ನಾವು ಗಮನಿಸಿದ್ದೇವೆ. ಅದು ಈಜಿ ಈಜಿ ದುರ್ಬಲವಾಗಿತ್ತು. ಹೀಗಾಗಿ ನಾವು ಎಮ್ಮೆಯ ಜೀವವನ್ನು ಉಳಿಸಲು ನಿರ್ಧರಿಸಿದೆವು. ಆದರೆ ಅದು ಹೇಳಿದಷ್ಟು ಸುಲಭವಾಗಿರಲಿಲ್ಲ. ಮೊದಲು ಎರಡು ದೊಡ್ಡ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಎಮ್ಮೆಯ ಎರಡೂ ಬದಿಗಳಲ್ಲಿ ಕಟ್ಟಿ ಅದು ತೇಲುವಂತೆ ಮಾಡಿದೆವು. ನಂತರ ಹಗ್ಗ ಬಳಸಿ ಎಮ್ಮೆಯನ್ನು ದೋಣಿಗಳಿಗೆ ಕಟ್ಟಿ ನಿಧಾನವಾಗಿ ದಡದೆಡೆಗೆ ಎಳೆದುಕೊಂಡು ಬಂದಿದ್ದೇವೆ ಎಂದು ಎ ಟಿ ಝಾಕಿರ್ ಮತ್ತು ಟಿ ಪಿ ಪುವಾದ್ ಹಾಗೂ ಎ ಟಿ ಫಿರೋಜ್ ಹೇಳಿದರು.
ಎಂಟು ಕಿಮೀ ದೂರದ ಸಮುದ್ರದ ಆಳಕ್ಕೆ ಎಮ್ಮೆ ಹೇಗೆ ತಲುಪಿತು ಎಂಬುದು ನಮಗೆ ತಿಳಿದಿಲ್ಲ. ನಮ್ಮ ಕೆಲಸದ ಸಮಯದಲ್ಲಿ ಆಳ ಸಮುದ್ರದಲ್ಲಿ ಇಂತಹ ಸಾಕು ಪ್ರಾಣಿಯನ್ನು ಗುರುತಿಸುವುದು ಮೊದಲ ಬಾರಿಗೆ ಅನುಭವವಾಗಿದೆ ಎಂದು ಅವರು ಹೇಳಿದ್ದಾರೆ.
ಎಮ್ಮೆಯನ್ನು ನಮ್ಮ ದೋಣಿಯ ಕಡೆಗೆ ಎಳೆಯುವುದು ಅಸಾಧ್ಯವಾಗಿತ್ತು. ಹಾಗಾಗಿ ಕೋಠಿಯಿಂದ ನಾಉವು ಇನ್ನೊಂದು ದೋಣಿ ವ್ಯವಸ್ಥೆ ಮಾಡಿದೆವು. 8 ಗಂಟೆಗೆ ಗಳ ಕಾಲ ಪ್ರಯತ್ನ ಪಟ್ಟು ಎಮ್ಮೆಯನ್ನು ದಡಕ್ಕೆ ಎಳೆದು ತಂದಿದ್ದೇವೆ ಎಂದು ಅವರು ಹೇಳಿದರು. ಅಂಥ ಆಳ ಸಮುದ್ರದಲ್ಲಿ ಅದು ಅಷ್ಟು ದೀರ್ಘ ಸಮಯದವರೆಗೆ ಈಜುತ್ತಲೇ ಇರುವುದು ನಮಗೆ ಅಚ್ಚರಿ ತಂದಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ