ಪಕ್ಷದ ಟಿಕೆಟ್ ಸಿಗದೆ ಪೊಲೀಸರೆದುರೇ ಗಳಗಳನೆ ಬಿಎಸ್‌ಪಿ ನಾಯಕ, ಆತ್ಮಾಹುತಿ ಬೆದರಿಕೆ | ವೀಕ್ಷಿಸಿ

ಮುಜಾಫರ್‌ನಗರ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಪಕ್ಷದ ಟಿಕೆಟ್‌ ವಿಚಾರದಲ್ಲಿ ಕಿತ್ತಾಟ ಜೋರಾತ್ತಿದೆ. ಮುಜಾಫರ್‌ನಗರದ ಚಾರ್ತಾವಾಲ್ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡರೊಬ್ಬರು ನಗರದ ಕೊತ್ವಾಲಿಯಲ್ಲಿ ಪೊಲೀಸರ ಮುಂದೆ ಗಳಗಳನೆ ಅತ್ತಿದ್ದಾರೆ..!

ಎರಡು ವರ್ಷಗಳ ಹಿಂದೆ ಪಕ್ಷದ ಹಿರಿಯ ನಾಯಕರೊಬ್ಬರು ಟಿಕೆಟ್‌ಗಾಗಿ 67 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಅದನ್ನು ತೆಗೆದುಕೊಂಡ ನಂತರ ಈಗ ತನಗೆ ಗೊತ್ತಿಲ್ಲದೆ ನನ್ನನ್ನು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪೊಲೀಸರ ಮುಂದೆ ಅಳುತ್ತಾ ಅರ್ಷದ್ ರಾಣಾ ಆರೋಪಿಸಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ತನಗೆ ನ್ಯಾಯ ಸಿಗದಿದ್ದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ರಾಣಾ ಅವರು ಎಚ್ಚರಿಕೆ ನೀಡಿದ್ದಾರೆ
ವಿಶೇಷವೆಂದರೆ, ಚಾರ್ತವಾಲ್ ವಿಧಾನಸಭಾ ಕ್ಷೇತ್ರದ ದಧೇಡು ಗ್ರಾಮದ ನಿವಾಸಿ ಅರ್ಷದ್ ರಾಣಾ ಅವರು ದೀರ್ಘಕಾಲದವರೆಗೆ ಬಿಎಸ್‌ಪಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಪತ್ನಿ ಕೂಡ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು. ಪಕ್ಷದ ಟಿಕೆಟ್ ಪಡೆಯುವ ಭರವಸೆಯೊಂದಿಗೆ, ರಾಣಾ ಬಹಳ ಹಿಂದಿನಿಂದಲೂ ಬಿಎಸ್ಪಿಯಿಂದ ಚಾರ್ತಾವಾಲ್ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದರು.
ಆದರೆ, ಒಂದು ದಿನ ಮುಂಚಿತವಾಗಿ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಟ್ವೀಟ್ ಮಾಡಿ, ಪಕ್ಷವು ಚಾರ್ತಾವಾಲ್ ವಿಧಾನಸಭಾ ಕ್ಷೇತ್ರದಿಂದ ಸಲ್ಮಾನ್ ಸಯೀದ್ ಅವರನ್ನು ಕಣಕ್ಕಿಳಿಸಿದೆ ಎಂದು ತಿಳಿಸಿದರು. ಸಲ್ಮಾನ್ ಸಯೀದ್ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಸಯೀದುಜ್ಜಮಾನ್ ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ. ಈ ಘೋಷಣೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ರಾಣಾ ಫೇಸ್‌ಬುಕ್‌ನಲ್ಲಿ ತಮ್ಮ ಸಂಕಷ್ಟದ ಬಗ್ಗೆ ಬರೆದು ನಂತರ ತಮ್ಮ ಬೆಂಬಲಿಗರೊಂದಿಗೆ ಕೊತ್ವಾಲಿ ನಗರವನ್ನು ತಲುಪಿದ್ದಾರೆ. ಪಕ್ಷದ ಮುಖಂಡರು ತೆಗೆದುಕೊಂಡ ಹಣವನ್ನು ಹಣ ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ರಾಣಾ ಬಿಎಸ್‌ಪಿ ಕಾರ್ಯಕರ್ತನ ವಿರುದ್ಧವೂ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಕೊತ್ವಾಲಿ ಪ್ರಭಾರಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement