ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಳ: ಇಂದು ಸಂಜೆ ಸಿಎಂ ಮಹತ್ವದ ಸಭೆ, ಕಠಿಣ ನಿಯಮ ಜಾರಿಯಾಗುತ್ತಾ..?

ಬೆಂಗಳೂ: ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೊಳಿಸಿದ್ದರೂ ಕೋವಿಡ್ ಏರಿಕೆ ಮುಂದುವರೆದಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಸೋಮವಾರ ಸಂಜೆ ಮಹತ್ವದ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಕೊವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಈಗ ಜಾರಿಗೊಳಿಸಿರುವ ನಿರ್ಬಂಧಗಳು ಜನೆವರಿ 19ಕ್ಕೆ ಅಂತ್ಯವಾಗಲಿವೆ. ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳು ಮತ್ತು ಸಚಿವರು ಮಾಹಿತಿ ನೀಡಲಿದ್ದಾರೆ. ಎಲ್ಲಾ ಜಿಲ್ಲೆಯ ಕೊರೊನಾ ಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳು ವರದಿ ಪಡೆಯಲಿದ್ದಾರೆ. ರಾತ್ರಿ ಕರ್ಫ್ಯೂ, ವರಾಂತ್ಯದ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬುದರ ಚರ್ಚೆ ಜೊತೆ ಮುಂದುವರಿಸಿದರೆ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಕಠಿಣ ಕ್ರಮ ಮತ್ತು ವೀಕೆಂಡ್ ಕರ್ಫ್ಯೂಗೆ ಹೋಟೆಲ್ ಮಾಲೀಕರ ವಿರೋಧದ ಬಗ್ಗೆ ಇಂದು ನಡೆಯುವ ಸಭೆಯಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ಅಲ್ಲದೆ, ಶಾಲೆಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಇನ್ನೂ ಲಸಿಕೆ ವ್ಯಾಪ್ತಿಯಲ್ಲಿ ಬಾರದ 1ರಿಂದ 9 ನೇ ತರಗತಿ ವರೆಗೆ ಭೌತಿಕ ತರಗತಿಗಳನ್ನು ಬಂದ್ ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ನಿಷೇಧಾಜ್ಞಾ, ವಾರಾಂತ್ಯದ ನಿಷೇಧಾಜ್ಞಾ, ಸಿನಿಮಾ ಮಂದಿರ, ರೆಸ್ಟೋರೆಂಟ್ ಸೇರಿ ಎಲ್ಲಾ ಕಡೆ ಶೇ. 50ರ ನಿಯಮ ಜಾರಿ, ಮದುವೆ ಸಮಾರಂಭಗಳಿಗೆ ಜನರ ಮಿತಿ ಹೇರಲಾಗಿದೆ. ಮೂರನೇ ಅಲೆ ಹೆಚ್ಚಾಗಿ ಶಾಲೆಗಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಬಂದ್ ಮಾಡುವ ಜವಾಬ್ದಾರಿಯನ್ನು ಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿದೆ.
ಲಾಕ್‍ಡೌನ್ ಮಾಡುವುದು ಬೇಡ ಎನ್ನುವುದೇ ಬಹುತೇಕರ ನಿಲುವಾಗಿದ್ದು, ಅದನ್ನು ಹೊರತುಪಡಿಸಿ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement