

ಕಾರವಾರ: ಕಸದ ರಾಶಿಯಲ್ಲಿ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಬದಲು, ಅವುಗಳ ವಾರಸುದಾರರನ್ನು ಪತ್ತೆಹಚ್ಚಿ ಹಿಂದಿರುಗಿಸುವ ಪ್ರಾಮಾಣಿಕತೆ ಎಲ್ಲರಲ್ಲೂ ಕಾಣಸಿಗುವುದಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯ ಇಬ್ಬರು ಸಿಬ್ಬಂದಿ ತ್ಯಾಜ್ಯದ ರಾಶಿಯಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ದೀಪಾವಳಿ ಹಬ್ಬದ ಪೂಜೆಯ ಬಳಿಕ ಮನೆಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಕಳಸವಾಡದ ನಿವಾಸಿ ಕವಿತಾ ನಾಯ್ಕ ಎಂಬವರು ಅರಿವಿಲ್ಲದೆ ತಮ್ಮ ಚಿನ್ನದ ಕಿವಿಯೋಲೆಯೊಂದನ್ನು ಕಸದ ಜೊತೆ ಹಾಕಿದ್ದರು. ಅದನ್ನು ಮನೆಮನೆ ಕಸ ಸಂಗ್ರಹಿಸುವ ನಗರಸಭೆಯ ವಾಹನ ಕೊಂಡೊಯ್ದಿತ್ತು. ಅದು ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲುಪಿದ ಬಳಿಕ ತ್ಯಾಜ್ಯವನ್ನು ವಿಂಗಡಣೆ ಮಾಡಲಾಯ್ತು. ತ್ಯಾಜ್ಯ ವಿಂಗಡಣೆ ಮಾಡುತ್ತಿದ್ದ ಮನೆಮನೆ ಕಸ ಸಂಗ್ರಹಣಾ ವಾಹನದ ಚಾಲಕ ಅರುಣ ಹಾಗೂ ಸಹಾಯಕ ಮದನ ಅವರ ಕಣ್ಣಿಗೆ ಕಸದ ನಡುವೆ ಹೊಳೆಯುತ್ತಿದ್ದ ಚಿನ್ನದ ಕಿವಿಯೋಲೆ ಬಿದ್ದಿದೆ. ತಕ್ಷಣವೇ ಅದರ ಇಬ್ಬರೂ ಸಿಬ್ಬಂದಿ, ಆಭರಣವನ್ನು ಜೋಪಾನವಾಗಿ ತೆಗೆದಿಟ್ಟುಕೊಂಡಿದ್ದಾರೆ.
ನಂತರ ಆಭರಣದ ಮಾಲೀಕರು ಯಾರೆಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಿದ ಸಿಬ್ಬಂದಿ, ವಿಚಾರಣೆ ಮೂಲಕ ಅದರ ವಾರಸುದಾರರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಬಳಿಕ ಕವಿತಾ ಅವರನ್ನು ಸಂಪರ್ಕಿಸಿ, ಕಳೆದುಹೋಗಿದ್ದ ಚಿನ್ನದ ಕಿವಿಯೋಲೆಯನ್ನು ಸುರಕ್ಷಿತವಾಗಿ ಅವರ ಕೈಗೆ ಮರಳಿಸಿದ್ದಾರೆ.
ಕಸದ ಜೊತೆ ಎಸೆಯಲ್ಪಟ್ಟು ಮತ್ತೆ ಸಿಗುವ ನಿರೀಕ್ಷೆಯನ್ನೇ ಕಳೆದುಕೊಂಡಿದ್ದ ಚಿನ್ನದ ಆಭರಣ ಮರಳಿ ಕೈ ಸೇರಿದಾಗ ಕವಿತಾ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಬ್ಬಂದಿಯ ಪ್ರಾಮಾಣಿಕತೆಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಯಾರ ಗಮನಕ್ಕೂ ಬಾರದೆ ತ್ಯಾಜ್ಯದೊಂದಿಗೆ ಕಣ್ಮರೆಯಾಗಬಹುದಾಗಿದ್ದ ಬೆಲೆಬಾಳುವ ಆಭರಣವನ್ನು ತಮ್ಮದಲ್ಲ ಎಂಬ ಪ್ರಜ್ಞೆಯಿಂದ ವಾರಸುದಾರರಿಗೆ ತಲುಪಿಸಿದ ಅರುಣ ಮತ್ತು ಮದನ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ತವ್ಯದ ನಡುವೆ ತೋರಿದ ಈ ಪ್ರಾಮಾಣಿಕತೆ ನಗರಸಭೆಯ ಸಿಬ್ಬಂದಿಯ ಬಗ್ಗೆ ಗೌರವ ಹೆಚ್ಚಿಸುವಂತಿದ್ದು, ನಗರಸಭೆ ಅಧಿಕಾರಿಗಳೂ ಇಬ್ಬರ ಕಾರ್ಯವನ್ನು ಶ್ಲಾಘಿಸಿದ್ದಾರೆ.





ನಿಮ್ಮ ಕಾಮೆಂಟ್ ಬರೆಯಿರಿ