ರಾಜ್ಯಾದ್ಯಂತ ಶಾಲಾ-ಕಾಲೇಜು ಮುಂದುವರಿಕೆ ; ಬೆಂಗಳೂರಿನ ಬಗ್ಗೆ ಮುಂದಿನ ವಾರ ನಿರ್ಧಾರ: ಸಚಿವ ನಾಗೇಶ

ಬೆಂಗಳೂರು : ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ನಡೆಯಲಿವೆ. ಬೆಂಗಳೂರಿನಲ್ಲಿ ಶಾಲೆಗಳ ಆರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಹೇಳಿದ್ದಾರೆ.
ಶುಕ್ರವಾರ ಕೋವಿಡ್‌ ತಜ್ಞರ ಜೊತೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾಹಿತಿ ನೀಡಿದ ಅವರು, ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಒಂದೊಂದೇ ಶಾಲೆಯನ್ನು ಯೂನಿಟ್ ಆಧಾರದಲ್ಲಿ ತೆಗೆದುಕೊಂಡು ಅಲ್ಲಿನ ಸಹಾಯಕ ಆಯುಕ್ತರು, ತಹಶೀಲ್ದಾರ್, ಬಿಇಒ ಅವರೆಲ್ಲರ ಅಭಿಪ್ರಾಯ ಪಡೆಯಲಾಗುತ್ತದೆ. ಎಲ್ಲಿಯಾದರೂ ಪಾಸಿಟಿವ್ ಬಂದರೆ ಆ ಶಾಲೆ ಮಾತ್ರ ಬಂದ್ ಮಾಡಬೇಕು, ಹೆಚ್ಚು ಪಾಸಿಟಿವ್ ಬಂದರೆ 7 ದಿನ, ಕಡಿಮೆ ಬಂದರೆ ಮೂರು ದಿನ ಶಾಲೆಗಳನ್ನ ಬಂದ್ ಮಾಡಿ ನಂತರ ಶಾಲೆಯನ್ನು ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜ.29ರ ವರೆಗೆ ಶಾಲೆಗಳನ್ನ ಮುಚ್ಚುವ ನಿರ್ಧಾರ ಮುಂದುವರೆಯಲಿದೆ. ಮುಂದಿನ ಶುಕ್ರವಾರ ಮತ್ತೆ ಸಭೆ ನಡೆಸಿ ಬೆಂಗಳೂರು ಶಾಲೆಗಳನ್ನ ತೆರೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
6 ರಿಂದ15 ವರ್ಷದ ಮಕ್ಕಳಿಗೆ ಪಾಸಿಟಿವಿಟಿ ದರ ಕಡಿಮೆ ಇರುವುದರಿಂದ ಈಗ ಇರುವ ರೀತಿಯಲ್ಲೇ ಶಾಲೆಗಳನ್ನ ನಡೆಸಲಾಗುತ್ತದೆ. ನಾಲ್ಕೈದು ಜಿಲ್ಲೆಗಳಲ್ಲಿ ನಿರ್ಬಂಧ ಇತ್ತು. ಅಲ್ಲಿಯೂ ಕೂಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಅಲ್ಲಿಯೂ ಪುನರ್ ಪರಿಶೀಲಿಸಿ ಬಂದ್ ಅಗತ್ಯ ಇಲ್ಲ ಎನ್ನುವ ಕಡೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

ರಾಜ್ಯದಲ್ಲಿ 533104 ಜನರನ್ನು ಪರೀಕ್ಷೆ ಮಾಡಲಾಗಿದೆ 5.94% ಪೊಸಿಟಿವ್ ಬಂದಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳು 5.9% ಇದೆ. ಬೆಂಗಳೂರಿನಲ್ಲಿ 14.12% ಇದೆ. 6 ಜಿಲ್ಲೆಗಳಲ್ಲಿ 9% ರಷ್ಟಿದೆ. 13 ಜಿಲ್ಲೆಗಳಲ್ಲಿ 9 % ಗಿಂತ ಕಡಿಮೆ ಇದೆ. ಉಳಿದ ಜಿಲ್ಲೆಗಳಲ್ಲಿ 5% ಕ್ಕಿಂತ ಕಡಿಮೆ ಇದೆ ಎಂದು ಸಚಿವರು ಹೇಳಿದ್ದಾರೆ.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement