ಈ ಬಾರಿ ಗಣರಾಜ್ಯೋತ್ಸವ ಪರೇಡಿಗೆ ಸ್ತಬ್ದಚಿತ್ರ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಆಯ್ಕೆ

ನವದೆಹಲಿ: ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ದಚಿತ್ರ ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವ ಪರೇಡಿಗೆ ಆಯ್ಕೆಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ. ಎಸ್. ಹರ್ಷ ತಿಳಿಸಿದ್ದಾರೆ.
ಆಯ್ಕೆಯಾದ 12 ರಾಜ್ಯಗಳ ಸ್ತಬ್ದಚಿತ್ರಗಳಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ಸ್ತಬ್ದಚಿತ್ರ ಕರ್ನಾಟಕದ್ದಾಗಿದೆ. ಅಲ್ಲದೆ, ರಾಜ್ಯದ ಸ್ತಬ್ದಚಿತ್ರ ಸತತವಾಗಿ ಹದಿಮೂರನೇ ಬಾರಿಗೆ ಆಯ್ಕೆಯಾಗುತ್ತಿದೆ.
ಕೌಶಲ್ಯದಿಂದ ತಯಾರಿಸಿದ ಮಡಿಕೆ, ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಶ್ರೀಗಂಧದ ಚಿಕಣಿ(ಮಿನಿಯೇಚರ್ಸ್ ಅಥವಾ ಕಿರು ಮಾದರಿ ವಸ್ತುಗಳು), ಕೈಮಗ್ಗದ ಸೀರೆಗಳು, ವಿಶಿಷ್ಠ ಕಲಾಕೃತಿಗಳನ್ನೊಳಗೊಂಡಂತೆ 16 ಕರಕುಶಲ ವಸ್ತುಗಳು ಭೌಗೋಳಿಕ ಸೂಚಿ ಸಂಕೇತದ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದು ಕರೆಯುತ್ತಾರೆ.
ಚೆನ್ನಪಟ್ಟಣ ಮತ್ತು ಕಿನ್ನಾಳ ಮರದ ಕೆತ್ತನೆ ವಸ್ತುಗಳು( ಇನ್‍ಲೇ ಕಾರ್ವಿಂಗ್ಸ್ ), ಕಂಚಿನ ಪ್ರತಿಮೆಗಳು, ಮೆರುಗೆಣ್ಣೆಯ ಹಾಗೂ ಬಿದರಿಯ ಕಲಾಕೃತಿಗಳು, ಟಿರ್ರಾಕೋಟ ಅತ್ಯಂತ ಹಳೆಯ ಕಲೆಯಾಗಿದೆ. ವಿಜಯನಗರದ ಅರಸರು ಪೋಷಿಸುತ್ತಿದ್ದ ಕಿನ್ನಾಳದ ಮೆರುಗೆಣ್ಣೆಯ ಕಲಾಕೃತಿಗಳು, ಕರ್ನಾಟಕದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಮತ್ತು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಶ್ರೀಗಂಧದ ಕಲಾಕೃತಿಗಳು ಹಾಗೂ ದಂತದ ಕೆತ್ತನೆಯ ಕಲೆ ವಿಶಿಷ್ಟ ಎನಿಸಿದೆ.
ಸ್ವಾತಂತ್ರ್ಯ ಹೋರಾಟಗಾರ್ತಿ, ಅಭಿನೇತ್ರಿ., ಸಮಾಜ ಸೇವಕರು, ಕಲಾ ಉತ್ತೇಜಕರೂ ಎಲ್ಲವೂ ಆಗಿದ್ದ ಕರ್ನಾಟಕದವರೇ ಆದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ನಶಿಸಿಹೋಗುತ್ತಿದ್ದ ಪಾರಂಪಾರಿಕ ಕರಕುಶಲ ವಸ್ತುಗಳ ತಯಾರಿಕಾ ಕಲೆಯನ್ನು ಉಳಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಗಮನಾರ್ಹ.
ಕರ್ನಾಟಕದ ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ ಹಾಗೂ ಈ ಕಲಾಕೃತಿಯ ಕೆಳಗಿನ ಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ. ಜೊತೆಗೆ, ಗಂಜೀಫಾ ಕಲಾಕೃತಿಗಳಿವೆ.
ಮಧ್ಯದಲ್ಲಿ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ. ಹೂಜಿಯ ಇಕ್ಕೆಲೆಗಳಲ್ಲಿ ಕರಾವಳಿಯ ವೈಶಿಷ್ಟ್ಯ ಬಿಂಬಿಸುವ ಭೂತಾರಾಧನೆಯ ಮುಖವಾಡವನ್ನು ಹೊತ್ತ ಲೋಹದ ಕಲಾಕೃತಿಗಳಿವೆ. ಹೂಜಿಯ ಹಿಂಬದಿಯಲ್ಲಿ ಬಿದರಿ ಕಲೆ ಬಳಸಿ ಸಿದ್ಧಪಡಿಸಿರುವ ನವಿಲುಗಳಿವೆ.
ಅಲ್ಲದೆ, ಮಧ್ಯ ಭಾಗದ ಹಿಂಬಂದಿಯಲ್ಲಿ ಕಿನ್ನಾಳದ ವೈಶಿಷ್ಟ್ಯಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಸ್ತಬ್ದಚಿತ್ರದ ಕೇಂದ್ರ ಬಿಂದುವಿನಂತೆ ಕಂಗೊಳಿಸುತ್ತಿದೆ. ಆಂಜನೇಯ ಸ್ವಾಮಿಯ ಮೂರ್ತಿಯ ಅಕ್ಕ-ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಮೆರುಗೆಣ್ಣೆಯ ಆಟಿಕೆಗಳು, ನವಲಗುಂದ ಧರಿ ( ಜಮಖಾನೆ ), ಶ್ರೀಗಂಧ ಮರದ ಕೆತ್ತನೆಯ ಹಾಗೂ ಮಣ್ಣಿನ ಕಲಾಕೃತಿಗಳಿವೆ.
ಕೊನೆಯಲ್ಲಿ ಕಲಾಲೋಕದ ಮಹಾ ಮಾತೆ, ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಗಂಧದ ಪೆಟ್ಟಿಗೆ, ನವಿಲಿನಾಕಾರದ ದೀಪದ ಕಲಶಗಳು, ಸಂಡೂರಿನ ಬಾಳೆ ನಾರಿನ ಚೀಲಗಳು ಹೀಗೆ ವಿವಿಧ ಕರಕುಶಲ ವಸ್ತುಗಳನ್ನು ಬಾಗಿನ ರೂಪದಲ್ಲಿ ನೀಡುತ್ತಿರುವ ದೃಶ್ಯಾವಳಿಯ ದೊಡ್ಡ ಪ್ರತಿಮೆ ಇದೆ.
ಕರ್ನಾಟಕದ ಕೈಮಗ್ಗದ ಹಿರಿಮೆಯ ಇಳಕಲ್ ಕಸೂತಿ ಸೀರೆಗಳು, ಮೊಳಕಾಲ್ಮೋರು ಸೀರೆಗಳು ಹಾಗೂ ಮೈಸೂರು ರೇಷ್ಮೆ ಸೀರೆಗಳು, ಕಿನ್ನಾಳ ಕಲೆಯಲ್ಲಿ ತಯಾರಿಸಿದ ಬಾಲೆಯರ ಕಲಾಕೃತಿಗಳು, ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಬೆತ್ತ, ಬಿದಿರು, ಕಾಡುಬಳ್ಳಿಗಳು ಹಾಗೂ ತಾಟಿನಿಂಗು ಮರದ ಎಲೆಯಿಂದ ತಯಾರಿಸಿದ ಬಗೆ ಬಗೆಯ ಬುಟ್ಟಿಗಳೂ ಕೂಡಾ ಸ್ತಬ್ದಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿದೆ.
ಈ ಸ್ತಬ್ದಚಿತ್ರ ನಿರ್ಮಾಣ ಕಾರ್ಯದಲ್ಲಿ ಹೆಸರಾಂತ ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ಒಂದು ನೂರಕ್ಕೂ ಹೆಚ್ಚು ಕಲಾವಿದರು, ಸುಪ್ರಸಿದ್ಧ ಸಂಗೀತ ನಿರ್ದೇಶಕ ಪ್ರವೀಣ್ ರಾವ್ ಮತ್ತು ತಂಡ ಹಾಗೂ ಜಾನಪದ ತಜ್ಞ ಡಾ ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡವೂ ಶ್ರಮಿಸಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement