ಧಾರವಾಡ ನಗರ -ಗ್ರಾಮೀಣ, ಹುಬ್ಬಳ್ಳಿ ನಗರ- ಗ್ರಾಮೀಣ ತಾಲೂಕಿನಾದ್ಯಂತ ಜನವರಿ 24 ರಿಂದ 1ರಿಂದ 8ನೇ ತರಗತಿ ಪುನಾರಂಭಕ್ಕೆ ಜಿಲ್ಲಾಧಿಕಾರಿ ಆದೇಶ

ಧಾರವಾಡ: ಜನವರಿ 24 ರಿಂದ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಾದ್ಯಂತದ ಶಾಲೆಗಳ 1 ರಿಂದ 8 ನೇ ತರಗತಿಗಳನ್ನು ಪುನರ್ ಆರಂಭಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಮಾಡಿದ್ದಾರೆ. ಹಾಗೂ ಈ ಮೊದಲಿನ ಶಾಲೆ ಬಂದ್‌ ಮಾಡುವ ಆದೇಶ ಹಿಂಪಡೆದಿದ್ದಾರೆ.
ಸರ್ಕಾರದ ಪರಿಷಕೃತ ಆದೇಶದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ 1897, ವಿಪತ್ತು ನಿರ್ವಹಣಾ ಕಾಯ್ದೆ 2005 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ಜಿಲ್ಲೆಯ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ 3 ರಿಂದ 5 ಪಾಸಿಟಿವ್ ಪ್ರಕರಣಗಳು ಬಂದರೆ 3 ದಿನ, 6 ರಿಂದ 20 ಪಾಸಿಟಿವ್ ಪ್ರಕರಣಗಳು ಬಂದರೆ 5 ದಿನ, 20 ಕ್ಕಿಂತ ಹೆಚ್ಚು ಪ್ರಕರಣಗಳು ಬಂದರೆ 7 ದಿನ, ಹೀಗೆ ಪ್ರಕರಣಗಳು ದಾಖಲಾದರೆ ಶಾಲೆ, ಕಾಲೇಜನ್ನು ತಕ್ಷಣ ಕ್ಲಸ್ಟರ್ ಎಂದು ಪರಿಗಣಿಸಿ ಅಂತಹ ಶಾಲಾ, ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಎಂದು ಘೋಷಿಸಲು ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಉಳಿದಂತೆ ಸಂಬಂಧಿಸಿದ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಪ್ರಾಂಶುಪಾಲರಿಗೆ ಸೂಚಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಜನೆವರಿ 12 ರಂದು ಧಾರವಾಡ ಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲ್ಲೂಕಿನಾದ್ಯಂತ 1 ರಿಂದ 8ನೇ ತರಗತಿ ವರೆಗಿನ ಶಾಲೆಗಳನ್ನು ದಿನಾಂಕ 13-01-2022 ರಿಂದ ಮುಂದಿನ ಆದೇಶವಾಗುವ ವರೆಗೆ ಶಾಲೆಗಳನ್ನು ತೆರೆಯದಂತೆ ಆದೇಶಿಸಿರುವದನ್ನು ಹಿಂಪಡೆಯಲಾಗಿದೆ. ಜನೆವರಿ 24, ಸೋಮವಾರದಿಂದ ಶಾಲೆಗಳನ್ನು ಪುನರ್ ಆರಂಭಿಸಲು ಅವರು ನಿರ್ದೇಶಿಸಿದ್ದಾರೆ.
ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ರನ್ವಯ ಜಿಲ್ಲೆಯ ಎಲ್ಲ ರೀತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವ್ಯಾಪ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನಾಗಿ ನೇಮಿಸಿ ಆದೇಶಿಸಿದ್ದು, ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

*ಶಾಲಾ, ಕಾಲೇಜುಗಳ ಮುಖ್ಯಸ್ಥರು ಪಾಲಿಸಬೇಕಾದ ನಿಯಮಗಳು:

*ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವ ಕುರಿತು ಮತ್ತು ಪುನರ್ ಆರಂಭಿಸುವ ಕುರಿತು ನಿಯಮಿತವಾಗಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು.
* ರಜೆ ಘೋಷಿಸಿದ ಅವಧಿಯಲ್ಲಿ ಶಾಲಾ, ಕಾಲೇಜು ಆವರಣವನ್ನು ಸ್ಯಾನಿಟೈಸ್‌ ಮಾಡಬೇಕು.
* ಸೋಂಕಿತ ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಗತಿ ಬಗ್ಗೆ ದಿನಂಪ್ರತಿ ವಿಚಾರಿಸುವುದು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು.
* ವಿದ್ಯಾರ್ಥಿಗಳಿಗೆ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ತಿಳುವಳಿಕೆಯನ್ನು ನೀಡುವುದು.
* ಸರ್ಕಾರದ ಮಾರ್ಗಸೂಚಿಗಳನ್ವಯ ಅರ್ಹ ವಿದ್ಯಾರ್ಥಿಗಳಿಗೆ ಲಸಿಕಾಕರಣ ಕುರಿತು ಕ್ರಮ ಕೈಕೊಳ್ಳುವುದು.
* ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಸೋಂಕಿತ ವಿದ್ಯಾರ್ಥಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಗಂಟಲು ದ್ರವ ತಪಾಸಣೆ ಕುರಿತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮ ವಹಿಸುವುದು.
* ರಜೆ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ಪಾಸಿಟಿವ್ ಪ್ರಕರಣಗಳ ಮಾಹಿತಿಯನ್ನು ಪಡೆದು ರಜೆಯನ್ನು ಮುಂದುವರೆಸುವ ಬಗ್ಗೆ ಅಥವಾ ಶಾಲೆಯನ್ನು ಪುನರ್ ಆರಂಭಿಸುವ ಬಗ್ಗೆ ನೋಡಲ್ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement