ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೊಲೋಗ್ರಾಮ್ ಪ್ರತಿಮೆ ಅನಾವರಣ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆ ಅನಾವರಣಗೊಳಿಸಿದರು. ಈ ಸ್ಥಳದಲ್ಲಿ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸುವ ವರೆಗೆ ಹೊಲೋಗ್ರಾಮ್ ಪ್ರತಿಮೆ ಇರಲಿದೆ.
ಅನಾವರಣ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಇದೊಂದು ಐತಿಹಾಸಿಕ ಸ್ಥಳ ಮತ್ತು ಐತಿಹಾಸಿಕ ಸಂದರ್ಭ. ಅವರ ಪ್ರತಿಮೆಯು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದರು.
ಇದು ಕೇವಲ ಪ್ರತಿಮೆಯಲ್ಲ, ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ನೇತಾಜಿಗೆ ನೀಡುವ ಸೂಕ್ತ ಗೌರವವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ವರ್ಷ ತುಸು ಒಂದುದಿನ ಮುಂಚೆ ಅಂದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದೊಂದಿಗೆ ಜನವರಿ 23 ರಂದು ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ ಪ್ರಾರಂಭವಾಗುತ್ತವೆ ಎಂದು ಸರ್ಕಾರವು ಈ ವಾರದ ಆರಂಭದಲ್ಲಿ ಘೋಷಿಸಿತು. ಅವರ ಜನ್ಮದಿನವನ್ನು ಪ್ರತಿ ವರ್ಷ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಯಕ್ರದ ಆರಂಭವಾಗಿ ನೇತಾಜಿ ಬೋಸ್ ಅವರ ಹೊಲೋಗ್ರಾಮ್ ಪ್ರತಿಮೆ ಅನಾವರಣ ಮಾಡಲಾಗಿದೆ.
ಹೊಲೋಗ್ರಾಮ್ ಪ್ರತಿಮೆಯು 30,000 ಲ್ಯೂಮೆನ್ಸ್ 4ಕೆ ಪ್ರೊಜೆಕ್ಟರ್‌ನಿಂದ ಚಾಲಿತವಾಗಿದೆ. ಸಂದರ್ಶಕರಿಗೆ ಕಾಣದ ರೀತಿಯಲ್ಲಿ ಹೊಲೋಗ್ರಾಫಿಕ್ ಪರದೆ ನಿರ್ಮಿಸಲಾಗಿದೆ. ನೇತಾಜಿ ಅವರ 3ಡಿ ಚಿತ್ರವನ್ನು ಹೊಲೋಗ್ರಾಮ್‌ನ ಇಫೆಕ್ಚ್ ಸೃಷ್ಟಿಸಲು ಅದರ ಮೇಲೆ ಪ್ರಕ್ಷೇಪಿಸಲಾಗಿದೆ. ಹೊಲೋಗ್ರಾಮ್ ಪ್ರತಿಮೆ 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement