ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ. ಹರಿಪ್ರಸಾದ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರನ್ನು ಬಿಟ್ಟಿದ್ದೆವು. ಸಿದ್ದರಾಮಯ್ಯ ಸಲುವಾಗೆ ದೇವೇಗೌಡರನ್ನು ಬಿಟ್ಟು ಬಂದೆ. 1996ರಲ್ಲಿ ರಾಜ್ಯಸಭೆ ಟಿಕೆಟ್ ಘೋಷಿಸಿ ಕ್ಯಾನ್ಸಲ್ ಮಾಡಿದರು. ಆಗ ಕಾಂಗ್ರೆಸ್ ಪಕ್ಷ ತೊರೆದೆ. ಆಗ ಕಾಂಗ್ರೆಸ್ ಎಲ್ಲಿ ಹೋಯ್ತು? 20 ವರ್ಷದ ಬಳಿಕ ಕಾಂಗ್ರೆಸ್ ಅದೇ ರೀತಿ ಮಾಡಿದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಸಿದ್ದರಾಮಯ್ಯ ಅವರಿಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಹೀಗೆ ಮಾಡಿದ್ದಕ್ಕೆ ಸಿದ್ದರಾಮಯ್ಯ ನಮಗೆ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆಯನ್ನು ಖುಷಿಯಿಂದ ಸ್ವೀಕರಿಸಿದ್ದೇನೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಾರೆಂದು ಗೊತ್ತಾಗಿ. ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವಂತೆ ಮಾಡಿದ್ದೆ. ಅಲ್ಲಿನ ಎಲ್ಲ ನಾಯಕರನ್ನು ಒಪ್ಪಿಸಿದ್ದೆ. ಬಾದಾಮಿಯಲ್ಲಿ ಅವರು ಗೆದ್ದು ಶಾಸಕರು ಕೂಡ ಆದರು. ನಾನು ಸಿದ್ದರಾಮಯ್ಯ ಅವರಿಗೆ ಹೊಸ ರಾಜಕೀಯ ಜೀವನ ಕೊಟ್ಟೆ. ಆದರೆ ಅವರು ನಮಗೆ ಇಂಥ ಹೊಸ ಗಿಫ್ಟ್ ನೀಡಿದ್ದಾರೆ ಎಂದು ಇಬ್ರಾಂಹಿಂ ಹೇಳಿದ್ದಾರೆ.
ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ ಅವರು ದೇವೇಗೌಡರನ್ನು ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನನಗೆ ಸ್ಥಾನ ತಪ್ಪಿಸಿದ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು. ಡಿ.ಕೆ. ಶಿವಕುಮಾರ ಅವರಿಗೂ ನಮಗೂ ಹೊಂದಾಣಿಕೆಯಾಗುವುದಿಲ್ಲ. ಸಿದ್ದರಾಮಯ್ಯ ಅವರಿಗೂ ನನಗೂ ಉತ್ತಮ ಬಾಂಧವ್ಯವಿತ್ತು. ದೆಹಲಿಯಿಂದ ನನಗೆ ಹಲವು ಕರೆಗಳು ಬಂದಿವೆ. ಎಲ್ಲ ಮಾಹಿತಿ ನನ್ನ ಬಳಿ ಇಟ್ಟುಕೊಂಡಿದ್ದೇನೆ. ಚುನಾವಣಾ ಪ್ರಚಾರಕ್ಕೆ ಉತ್ತರ ಪ್ರದೇಶಕ್ಕೆ ಬರುವಂತೆ ಕರೆಯುತ್ತಿದ್ದಾರೆ. ಆದರೆ ನಾವು ಅಷ್ಟು ದೊಡ್ಡ ನಾಯಕರಲ್ಲ. ನಮ್ಮಿಂದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ರಾಜಕೀಯ ವಿದ್ಯಮಾನ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇನೆ. ಎಐಸಿಸಿ ನನಗೆ ಸಂಕ್ರಾಂತಿಗೆ ಶುಭಾಶಯವನ್ನು ನೀಡಿದೆ. ಎಐಸಿಸಿ ಗಿಫ್ಟ್ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಮಾಧ್ಯಮ, ನ್ಯಾಯಾಂಗದಲ್ಲಿ ಮಾತ್ರ ವಿಶ್ವಾಸ ಉಳಿದಿದೆ ಎಂದು ಮಾತನಾಡಿದ ಇಬ್ರಾಹಿಂ, ನನಗೆ ಸ್ವಲ್ಪ ಸಾಲ ಇದೆ ಅದನ್ನು ತೀರಿಸಬೇಕಾಗಿದೆ. ಸಾಲ ತೀರಿದ್ದರೆ ಮೊದಲೇ ತೀರ್ಮಾನ ಮಾಡುತ್ತಿದ್ದೆ. ಸಾಲ ತೀರಿಸಿ 8-10 ದಿನದಲ್ಲಿ ತೀರ್ಮಾನ ಮಾಡುತ್ತೇನೆ. ಎಚ್ ಡಿ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್ನ ಕೆಲವು ನಾಯಕರು ಕರೆ ಮಾಡಿ ಮಾತಾಡಿದ್ದಾರೆ. ಅವರು ಹೆಸರು ಹೇಳಿದರೆ ಅವರಿಗೂ ಸಮಸ್ಯೆಯಾಗುತ್ತದೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 120 ಇದ್ದಿದ್ದು 80ಕ್ಕೆ ಬಂದಿದೆ. 80ರಿಂದ ಮತ್ತೆ ಎಲ್ಲಿಗೆ ಬರುತ್ತೆಂದು ನೀವು ಊಹಿಸಿಕೊಳ್ಳಿ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ