ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ ರಾವ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್​ ರಾವ್​ ನಿಧನರಾಗಿದ್ದಾರೆ.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಡಾ. ರಾಜ್​ಕುಮಾರ್​ ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜೊತೆ ಅಶೋಕ್​ ರಾವ್​ ಮಂಗಳವಾರ ರಾತ್ರಿ 12.30ಕ್ಕೆ ಅವರು ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ, ಹಾಗೂ ಮಗನನ್ನು ಅಶೋಕ್​ ರಾವ್​ ಅಗಲಿದ್ದಾರೆ. ಕೆಲವು ವರ್ಷಗಳಿಂದ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿಯವರೆಗೂ ಚೆನ್ನಾಗಿದ್ದರು.

ಹಲವು ವರ್ಷಗಳ ತಮ್ಮ ಸಿನಿ ಪಯಣದಲ್ಲಿ ಅಶೋಕ್​ ರಾವ್​ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿದ್ದರು. ವಿಶೇಷವಾಗಿ ಖಳನಾಯಕನ ಪಾತ್ರಗಳ ಮೂಲಕ ಅವರು ಹೆಸರು ಮಾಡಿದ್ದರು. ಡಾ. ರಾಜ್​ಕುಮಾರ್​ ಅಭಿನಯದ ‘ಪರಶುರಾಮ್​’ ಚಿತ್ರದಲ್ಲಿ ಖಳ ನಟನಾಗಿ ಗಮನ ಸೆಳೆದಿದ್ದರು. ಅಶೋಕ್​ ರಾವ್​ ಅವರ ಪ್ರತಿಭೆಯನ್ನು ಗಮನಿಸಿದ್ದ ರಾಜ್​ಕುಮಾರ್​ ಅವರೇ ಕರೆದು ‘ಪರಷುರಾಮ್​’ ಸಿನಿಮಾದ ಖಳನಾಯಕನ ಪಾತ್ರವನ್ನು ನೀಡಿದ್ದರು.
ಅಶೋಕ್ ರಾವ್ ಅವರು ಜನಿಸಿದ್ದು ಕೇರಳದ ಕಾಸರಗೋಡಿನಲ್ಲಿ. ತಮಿಳುನಾಡಿನ ಸೇಲಂ ಬಳಿಯ ಒಂದು ವಸತಿ ಶಾಲೆಯಲ್ಲಿ ಅಶೋಕ ರಾವ್​ ಶಿಕ್ಷಣ ಪಡೆದರು. ಆಗಲೇ ಅವರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿತ್ತು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಸಿಕ್ಕವು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್​ ನಾಟಕಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.
ಅಶೋಕ್​ ರಾವ್​ ನಟಿಸಿದ ಮೊದಲ ಸಿನಿಮಾ ‘ಪರಶುರಾಮ್​’. ಮೊದಲ ಚಿತ್ರದಲ್ಲಿಯೇ ಡಾ. ರಾಜ್​ಕುಮಾರ್​ ಎದುರು ಮುಖ್ಯ ವಿಲನ್​ ಆಗಿ ನಟಿಸುವ ಅವಕಾಶ ಅವರನ್ನು ಅರಸಿ ಬಂದಿತ್ತು. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ಅಶೋಕ್​ ರಾವ್​ ಅವರು ಬಳಿಕ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡರು. ಅಂಕುಶ, ಸರ್ಕಸ್, ಬಾನಲ್ಲೇ ಮಧುಚಂದ್ರಕೆ ಶಿವಂ, ವಸುಂಧರಾ, ಬ್ರಹ್ಮ, ಅತಿ ಅಪರೂಪ, ಪರಿಣಯ, ಶತ್ರು, ಮುಗಿಲ ಚುಂಬನ, ರಾಣಾ ಪ್ರತಾಪ್, ಬಾಸ್, ಪೊಲೀಸ್ ಕಥೆ, ಜೇಡ್ರಳ್ಳಿ, ಹೂ, ಕೃಷ್ಣನ್ ಲವ್ ಸ್ಟೋರಿ, ಕುಣಿದು ಕುಣಿದು ಬಾರೆ, ಯುವ, ಮನಸಾರೆ, ಮ್ಯಾಡ್ ಲವ್, ಬೊಂಬಾಟ್, ಅರ್ಜುನ್, ಸಂಗಾತಿ, ಪೊಲೀಸ್ ಕಥೆ, ಸಜನಿ, ಸೌಂದರ್ಯ, ಬೊಂಬುಗಳು ಸಾರ್ ಬೊಂಬುಗಳು, ಮತಾಡ್ ಮಾತಾಡ್ ಮಲ್ಲಿಗೆ, ಆಪರೇಷನ್ ಅಂಕುಶ, ತವರಿನ ಸಿರಿ, ತಿರುಪತಿ, ಸೈನೈಡ್, ಸಿರಿವಂತ, ರಿಷಿ, ಗಡಿಪಾರ್, ಇನ್ಸ್‌ಪೆಕ್ಟರ್ ಝಾನ್ಸಿ, ಆಟೋ ಶಂಕರ್, ಓಂ ಗಣೇಶ್, ಪ್ರೇಮಾ ಖೈದಿ, ಸೈನಿಕ, ಇಂದ್ರ ಧನುಷ್, ಹಬ್ಬ, ಓ ಪ್ರೇಮವೇ, ಸ್ನೇಹ, ಟುವ್ವಿ ಟುವ್ವಿ ಟುವ್ವಿ, ಜೋಡಿ ಹಕ್ಕಿ, ಅಶ್ವಮೇಧ, ಶೃಂಗಾರ ಕಾವ್ಯ ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಶೋಕ್​ ರಾವ್​ ನಟಿಸಿದ್ದಾರೆ. ಇತ್ತೀಚೆಗೆ ಕೆಲ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement