ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳಿಗೆ ಪಟ್ಟ

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮಠ ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳು ನೇಮಕವಾಗಿದ್ದು, ಇಂದು, ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮ ನಡೆದಿದೆ.
ಶ್ರೀಮಠಕ್ಕೆ ಇಂದು ನೂತನ ಉತ್ತರಾಧಿಕಾರಿಯನ್ನಾಗಿ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸರು ಮಠದ ಶ್ರೀಗಳಾದ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಶಿರಹಟ್ಟಿ ಫಕ್ಕೀರೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಅಪಾರ ಭಕ್ತರು, ಹಾಗೂ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಪ್ರದಾಯ ಬದ್ಧವಾಗಿ ನೇಮಕ ಮಾಡಲಾಯಿತು.
ಪಟ್ಟಾಧ್ಯಕ್ಷರಾದ ಶ್ರೀ ಫಕ್ಕೀರೇಶ್ವರ ಸಿದ್ದರಾಮ ಮಹಾಸ್ವಾಮಿಗಳು, ಮೂಲ ಕರ್ತೃಗದ್ದುಗೆ ಪ್ರೇರಣೆಯಂತೆ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳನ್ನು ಮಾಡುವಂತೆ ಕರ್ತೃಗದ್ದುಗೆ ಪ್ರೇರಣೆ ಆಗುತ್ತಿತ್ತು. ಹಾಗಾಗಿ ಬಾಲೆಹೊಸರು ಗ್ರಾಮದ ಭಕ್ತರು ಹಾಗೂ ಶಿರಹಟ್ಟಿ ಫಕ್ಕೀರೇಶ್ವರ ಮಠದ ಭಕ್ತರ ಸಮ್ಮುಖದಲ್ಲಿ ಇಂದು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಫಕ್ಕೀರೇಶ್ವರ ಮಠದ ಹಿರಿಯ ಶ್ರೀ ಫಕ್ಕೀರೇಶ್ವರ ಸಿದ್ದರಾಮ ಮಹಾಸ್ವಾಮಿಗಳು ಘೋಷಣೆ ಮಾಡಿದ್ದಾರೆ.
ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿಯಾಗಿ ನೇಮಕವಾದ ಬಳಿಕ ಬಾಲೆಹೊಸರು ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಶ್ರೀ ಮಠದ ಪರಂಪರೆಯಂತೆ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಎಂದು ನಾಮಕರಣ ಮಾಡಲಾಗಿದೆ. ದಿಂಗಾಲೇಶ್ವರ ಶ್ರೀಗಳು ಮೊದಲಿನ ಕಾವಿ ವಸ್ತ್ರಗಳು ತೆಗೆದು ಫಕೀರೇಶ್ವರ ಮಠದ ಸಂಪ್ರದಾಯದಂತೆ ವಸ್ತ್ರವಿನ್ಯಾಸ ತೊಟ್ಟು ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈಗಿನ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಹಿರಿಯ ಶ್ರೀಗಳಾಗಿ ಹಾಗೂ ಉತ್ತರಾಧಿಕಾರಿಯಾಗಿ ನೇಮಕವಾದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಶ್ರೀಗಳಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ‌. ಶಿರಹಟ್ಟಿ ಫಕೀರೇಶ್ವರ ಮಠದ ಸಂಪ್ರದಾಯ ಕೂಡಾ ಬಹಳ ವಿಭಿನ್ನವಾಗಿವೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಗತವೈಭವವನ್ನು ಸಾರುವುದರ ಮೂಲಕ ದೇಶದಲ್ಲಿಯೇ ಹಿಂದೂ ಮುಸ್ಲಿಂ ಸಂಪ್ರದಾಯವನ್ನು ಶತ ಶತಮಾನಗಳಿಂದ ಅಳವಡಿಸಿಕೊಂಡು ಇಂದಿಗೂ ಸಹ ಮಠದ ಆಚರಣೆಯೂ ದಿನ ನಿತ್ಯ ಹಿಂದೂ ಮುಸ್ಲಿಂ ಪರಂಪರೆಯಂತೆ ನಡೆದುಕೊಂಡು ಬರುತ್ತಿವೆ. ಹೀಗಾಗಿ ಫಕೀರೇಶ್ವರ ಮಠದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ನೂತನ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ಫಕೀರೇಶ್ವರ ಮಠದ ಸುಮಾರು 60 ಶಾಖಾ ಮಠಗಳು, ಹಾಗೂ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ ನೂತನವಾಗಿ ಉತ್ತರಾಧಿಕಾರಿಗಳ ಮೇಲಿದೆ. ಫಕೀರೇಶ್ವರ ಕರ್ತೃಗದ್ದುಗೆ ಪ್ರೇರಣೆಯಂತೆ ಉತ್ತರಾಧಿಕಾರಿ ನೇಮಕವಾಗಿದ್ದು, ಭಕ್ತರಲ್ಲಿ ಸಂತಸ ಮೂಡಿಸಿದೆ.
ಶಿರಹಟ್ಟಿ ಮಠಕ್ಕೆ ದಿಂಗಾಲೇಶ್ವರ ಸ್ವಾಮೀಜಿ ನೇಮಕವಾಗಿರುವುದು ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದಲಿಂಗ ಹೊಂಬಾಳಿ ಮಠ ಹೇಳಿದ್ದಾರೆ.
ಬಾಲೆಹೊಸೂರಿನ ಗ್ರಾಮದ ಪ್ರತಿಯೊಂದು ಮನೆಗೆ ದಿಂಗಾಲೇಶ್ವರ ಸ್ವಾಮಿಗಳು ಭೇಟಿ ನೀಡಿ ಸ್ವಚ್ಛತೆ, ನೈರ್ಮಲ್ಯ, ಶೌಚಾಲಯದ ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. , ಜನರ ದುಶ್ಚಟ್ಟಗಳನ್ನು ಜೋಳಿಗೆಗೆ ಹಾಕಿಸುವ ಮೂಲಕ ಸಮಾಜದ ಸುಧಾರಣೆಗೆ ದಿಂಗಾಲೇಶ್ವರ ಸ್ವಾಮೀಜಿಗಳು ಪ್ರಮುಖ ಪಾತ್ರ ವಹಿಸಿರುವುದನ್ನು ಸಭೆಯಲ್ಲಿ ಮುಕ್ತಕಂಠದಿಂದ ಶ್ಲಾಘಿಸಲಾಯಿತು.
ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗುವ ಕುರಿತು ಈ ಹಿಂದೆ ಬಹುದೊಡ್ಡ ಚರ್ಚೆಯಾಗಿತ್ತು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement