ಶಿರಸಿ ಬ್ಲ್ಯಾಕ್‌ ಮೇಲ್‌ ಪ್ರಕರಣ: ಮತ್ತೊಬ್ಬ ಆರೋಪಿಗಾಗಿ ಶೋಧ, ಶೀಘ್ರವೇ ಸತ್ಯ ಬಯಲಿಗೆ

ಕಾರವಾರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ತಾಸಿನೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಬಂಧನಕ್ಕೆ ಶೋಧನಾ ಕಾರ್ಯ ನಡೆಯುತ್ತಿದೆ. ಶೀಘ್ರವೇ ಸತ್ಯಾಂಶ ಬಯಲಿಗೆಳೆಯಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ಡಾ. ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ.

ಈ ಬಗ್ಗೆ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿ ಆಧಾರದಂತೆ ಶಿರಸಿಯ ದೂರುದಾರ ಹಾಗೂ ಪ್ರಥಮ ಆರೋಪಿ ಪರಸ್ಪರ ಪರಿಚಿತರಾಗಿದ್ದು, ಮೊದಲಿನಿಂದಲೂ ಸಂಪರ್ಕದಲ್ಲಿರುವವರಾಗಿದ್ದಾರೆ. ಸರ್ಕಾರಿ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ ದೂರುದಾರರನನ್ನು ಶಿವಮೊಗ್ಗಕ್ಕೆ ಕರೆಸಿಕೊಂಡು ಕೆಲವು ನಗ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೇಳಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನ ಪ್ರಕಾರ ಮೂವರು ಆರೋಪಿಗಳನ್ನು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 24 ತಾಸಿನೊಳಗೆ ಆರೋಪಿಗಳಾದ ಅಜಿತ್ ನಾಡಿಗ, ಧನುಷ್ ಕುಮಾರ, ಪದ್ಮಜಾ ಸೇರಿ ಒಟ್ಟೂ ಮೂವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಆತನನ್ನೂ ಬಂಧಿಸಲಾಗುವುದು. ಆರೋಪಿತ ಶಿವಮೊಗ್ಗದ ಮಹಿಳೆ ವಿದ್ಯಾವಂತೆಯಾಗಿದ್ದು, ದುಡ್ಡಿನ ಅವಶ್ಯಕತೆಯಿಂದಾಗಿ ಈ ಕೃತ್ಯಕ್ಕೆ ಒಪ್ಪಿಕೊಂಡಿದ್ದಾಳೆ. ಶೀಘ್ರವೇ ಆರೋಪಿಗಳಿಂದ ೀ ಪ್ರಕರಣದ ಹಿಂದಿನ ಸಂಪೂರ್ಣ ಸತ್ಯಾಂಶವನ್ನು ಬಯಲಿಗೆಳೆಯಲಾಗುವುದು ಎಂದು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement