ಸಿನೆಮಾ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದ ಸರ್ಕಾರ

ಬೆಂಗಳೂರು: ಕೋವಿಡ್ ಆತಂಕದಿಂದಾಗಿ ಚಿತ್ರಮಂದಿರಗಳ ಮೇಲೆ ಹೇರಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ಇಂದು, ಶುಕ್ರವಾರ ಹಿಂಪಡೆದಿದೆ. ನಾಳೆಯಿಂದಲೇ (ಫೆಬ್ರವರಿ 5) ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅಂದರೆ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿದ ನಂತರ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.
ಸಭೆಯಲ್ಲಿ ಚಿತ್ರಮಂದಿರಗಳು, ಜಿಮ್ ಮತ್ತು ಈಜುಕೊಳಗಳಲ್ಲಿ 100% ಭರ್ತಿಗೆ ಅನುಮತಿ ನೀಡಲು ನಿರ್ಧರಿಸಲಾಯಿತು.
ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘’ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿಗಳು ಸಭೆ ಕರೆಯಲಾಗಿತ್ತು. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಕುಸಿತ ಕಂಡಿರುವುದರಿಂದ ಹಾಗೂ ಚಲನಚಿತ್ರ ಮಂದಿರಗಳು, ನಿರ್ಮಾಪಕರು ಹಾಗೂ ಚಿತ್ರೋದ್ಯಮದಲ್ಲಿ ತೊಡಗಿರುವವರಿಗೆ ನಷ್ಟ ಉಂಟಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಾಳೆಯಿಂದ (ಶನಿವಾರದಿಂದ) ಚಿತ್ರೋದ್ಯಮದವರಿಗೆ ಅನುಕೂಲವಾಗುವಂತೆ ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿಗೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನ ಮಾಡಿದ್ದಾರೆ. ಅಲ್ಲದೆ, ಯೋಗಾ ಸೆಂಟರ್, ಜಿಮ್, ಈಜುಕೊಳಗಳಿಗೆ 100% ಭರ್ತಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
‘ ಸಿನಿಮಾ ನೋಡಲು ಹೋಗುವವರು ’ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು’, ಥಿಯೇಟರ್‌ನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಚಿತ್ರಮಂದಿರದೊಳಗೆ ತಿಂಡಿ- ತಿನಿಸು ಸೇವಿಸಲು ಅವಕಾಶ ಕೊಡಬಾರದು. ಇಂಟರ್ವೆಲ್‌ ಸಮಯದಲ್ಲಿ ಹೊರಗೆ ಬಂದಾಗ ತಿಂಡಿ ಸೇವಿಸಬಹುದು ಎಂದು ತಿಳಿಸಿದರು.
ಥಿಯೇಟರ್‌ಗಳಲ್ಲಿ 100% ಸೀಟು ಭರ್ತಿಗೆ ಅವಕಾಶ ನೀಡುವಂತೆ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿತ್ತು. ಇದಕ್ಕೆ ಬಸವರಾಜ ಬೊಮ್ಮಾಯಿ ಸಕಾರಾತ್ಮಕ ಸ್ಪಂದನೆ ನೀಡಿದ್ದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement