ಕುಂದಾಪುರದಲ್ಲಿ ತೀವ್ರಗೊಂಡ ಹಿಜಾಬ್‌ ವಿವಾದ: ಬೇರೆ ಕಾಲೇಜುಗಳಿಗೂ ವಿಸ್ತರಣೆ.. ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಮೆರವಣಿಗೆ

ಉಡುಪಿ:ಕುಂದಾಪುರದಲ್ಲಿ ಹಿಜಾಬ್ ವಿವಾದ ಸಂಘರ್ಷ 4ನೇ ದಿನಕ್ಕೆ ಕಾಲಿಟ್ಟಿದ್ದು ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕುಂದಾಪುರದಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ಹಿಜಾಬ್ ಧರಿಸುವುದನ್ನು ವಿರೋಧಿಸಿ ಆರ್. ಎನ್. ಶೆಟ್ಟಿ ಮತ್ತು ಬಂಡಾರ್ಕಾರ್ಸ್ ಕಾಲೇಜಿವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಂದಾಪುರದ ಆರ್‌.ಎನ್‌.ಶೆಟ್ಟಿ ಕಾಲೇಜಿಗೆ ಶನಿವಾರ ದಿಢೀರ್‌ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ. ಆರ್.ಎನ್ ಶೆಟ್ಟಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕುಂದೇಶ್ವರ ಬಳಿಯಿಂದ ಕೇಸರಿ ಶಾಲು ಧರಿಸಿ ಮೆರವಣಿಗೆ ಮೂಲಕ ಕಾಲೇಜಿಗೆ ಆಗಮಿಸಿದರು.

ಸ್ಥಳಕ್ಕಾಗಮಿಸಿದ ಪೊಲೀಸರು ಕಾಲೇಜು ಆಡಳಿತ ಮಂಡಳಿಯ ಜೊತೆ ಚರ್ಚಿಸಿದರು. ಗೊಂದಲಮಯ ವಾತಾವರಣದ ಹಿನ್ನೆಲೆಯಲ್ಲಿ ಆರ್.ಎನ್. ಶೆಟ್ಟಿ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಯಿತು.ಕಾಲೇಜಿನಿಂದ ಹೊರಬಂದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕುಂದಾಪುರ ಶಾಸ್ತ್ರೀ ವೃತ್ತದ ತನಕ ಘೋಷಣೆ ಕೂಗುತ್ತ ಮೆರವಣಿಗೆ ಮಾಡಿದರು.
.ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು. ಕುಂದೇಶ್ವರ ದೇವಸ್ಥಾನದಿಂದ ಘೋಷಣೆ ಕೂಗುತ್ತ ದೊಡ್ಡ ಸಂಖ್ಯೆಯಲ್ಲಿ ಘೋಷಣೆಯೊಂದಿಗೆ ಮುಖ್ಯರಸ್ತೆಯಲ್ಲಿ ಸಾಗಿಬಂದು ಕಾಲೇಜಿನ ಆವರಣಕ್ಕೆ ಬಂದರು. ಕಾಲೇಜು ಆಡಳಿತ ಯಾವುದೇ ವಿದ್ಯಾರ್ಥಿಯೂ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜು ಆವರಣ ಪ್ರವೇಶ ಮಾಡಬಾರದೆಂದು ಸೂಚನೆ ನೀಡಿತ್ತು. ಕಾಲೇಜ್ ತನಕವೂ ಕೇಸರಿ ಶಾಲು ಧರಿಸಿ ಬಂದು ಬಳಿಕ ಶಾಲು ತೆಗೆದಿಟ್ಟು ಕಾಲೇಜಿಗೆ ಪ್ರವೇಶಿಸಿದರು.
ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಮೆರವಣಿಗೆಯ ಸಂದರ್ಭದಲ್ಲಿಯೂ ತೀವ್ರ ಎಚ್ಚರಿಕೆ ವಹಿಸಲಾಗಿತ್ತು.
ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ನಿನ್ನೆಯೇ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಈಗ ಸ್ಥಳೀಯ ಖಾಸಗಿ ಕಾಲೇಜುಗಳಲ್ಲಿಯೂ ಹಿಜಾಬ್‌ ವಿವಾದ ಉಲ್ಬಣಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement