ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್-ಎಪಿಎಲ್ ಕಾರ್ಡ್‍ಗಳ ವಿತರಣೆ: ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸುಮಾರು 4 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ಗಳಿಗೆ ಮಂಜೂರಾತಿ ನೀಡಲಾಗಿದ್ದು, ಇವುಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗ್ರಾಮ ಒನ್ ಯೋಜನೆಯ ಪ್ರಗತಿ ಕುರಿತು ಶನಿವಾರ ಜಿಲ್ಲಾಡಳಿತ ಹಾಗೂ ಗ್ರಾಮ ಒನ್ ಕಂಪ್ಯೂಟರ್ ಆಪರೇಟರುಗಳೊಂದಿಗೆ ನಡೆದ ವಿಡಿಯೊ ಸಂವಾದದಲ್ಲಿ ಮಾತನಾಡಿ ಅವರು, ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಜವಾಬ್ದಾರಿಯನ್ನು ಆಪರೇಟರ್ಸ್‍ಗಳಿಗೆ ವಹಿಸಲಾಗಿದೆ. ಜನರ ಬಳಿ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಜನರಿಗೆ ಕಚೇರಿಗೆ ಅಲೆದಾಟ ತಪ್ಪಿಸಿ
ಜನರ ಎಲ್ಲ ಮಾಹಿತಿಗಳು ಕಾಗದರೂಪದಲ್ಲಿಯೇ ಪಡೆಯುವ ಅವಶ್ಯಕತೆಯಿಲ್ಲ. ‘ಕುಟುಂಬ’ ಜನಸೇವಕ ಸಾಫ್ಟ್‍ವೇರ್‌ ಗಳಲ್ಲಿಯೂ ಮಾಹಿತಿಗಳು ಲಭಿಸುತ್ತದೆ. ಜನರು ಕಚೇರಿಗೆ ಅನಗತ್ಯ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರ್ಕಾರದ ಸೇವೆ ನೀಡಿ. ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆಯನ್ನು ನೀಡಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ಗ್ರಾಮ ಪಂಚಾಯತ ವ್ಯಾಪ್ತಿಗೆ ಮೀರಿದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಅರಿವು ಇರಬೇಕು ಎಂದರು.
ಅರ್ಜಿಗಳು ಕಡಿಮೆ ಬಂದರೆ, ಅಲ್ಲಿ ಪ್ರಚಾರ ಹಾಗೂ ಸ್ಪಂದನೆಯ ಕೊರತೆಯನ್ನು ಬಿಂಬಿಸುತ್ತದೆ. ಹಿರಿಯ ನಾಗರಿಕರು, ಬಡವರು ಹಾಗೂ ಅಂಗವಿಕಲರಿಗೆ ಇರುವ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಸೇವೆ ಒದಗಿಸಬೇಕು ಎಂದು ಸೂಚನೆ ನೀಡಿದರು.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

ಕಾರ್ಯಕ್ಷಮತೆ ಆಧರಿಸಿ ಬಹುಮಾನ
ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ಸ್‍ಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಪ್ರತಿ ವಾರ ಮೂರು ಉತ್ತಮ ಆಪರೇಟರ್ಸ್ ಗಳನ್ನು ಆಯ್ಕೆ ಮಾಡಿ ಪ್ರಥಮ ಬಹುಮಾನ 10,000 ರೂ. ದ್ವಿತೀಯ ಬಹುಮಾನ 7,000 ರೂ. ಹಾಗೂ ತೃತೀಯ ಬಹುಮಾನ ರೂ.5,000 ರೂ. ಗಳನ್ನು ಇ ಆಡಳಿತ ಇಲಾಖೆ ವತಿಯಿಂದ ನೀಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಜಿಲ್ಲೆ ತಿಂಗಳಿಗೊಮ್ಮೆ 1 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ಗ್ರಾಮ ಒನ್ ಕೇಂದ್ರಗಳನ್ನು ಆದ್ಯತೆ ಮೇಲೆ ಪ್ರಾರಂಭಿಸಲು ಹಾಗೂ ಸಾರ್ವಜನಿಕರು ಗ್ರಾಮ ಒನ್‍ನಲ್ಲಿ ಸೇವೆಗಳ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement