ಇಂದಿನಿಂದ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ವರಿಷ್ಠರ ಜೊತೆ ಸಂಪುಟದ ಬಗ್ಗೆ ಚರ್ಚೆ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದು, ಸಂಸದರು ಹಾಗೂ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಅದರ ಜೊತೆಗೆ ಸಂಪುಟ ವಿಸ್ತರಣೆ ಬಗ್ಗೆಯೂ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ನಡೆಯುವಾಗ ಮತ್ತು ರಾಜ್ಯದ ಬಜೆಟ್‌ಗೆ ಮುನ್ನ ಸಂಸದರೊಂದಿಗೆ ಸಭೆ ನಡೆಸುವ ರೂಢಿಯಿದೆ. ಆದಾಗ್ಯೂ ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಗೆ ಹೋಗುತ್ತಿರುವುದರಿಂದ ಸಚಿವ ಹುದ್ದೆ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಗರಿಗೆದರಿದೆ. ಆದರೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ತಕ್ಷಣಕ್ಕೇ ಸಂಪುಟ ವಿಸ್ತರಣೆಗೆ ಹೈಕಮಾಂಡ್‌ ಒಪ್ಪುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ದೆಹಲಿ ಭೇಟಿ ಸಮಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರೆ, ಅವರು ಈ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿ ಪ್ರವಾಸದ ಹಿನ್ನೆಲೆಯಲ್ಲಿ ಹಲವರು ಸಚಿವಾಕಾಂಕ್ಷಿ ಶಾಸಕರು ದೆಹಲಿಗೆ ತೆರಳು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ ಹೈಕಮಾಂಡ್‌ ಏನು ಹೇಳುತ್ತದೆ ಎಂಬುದರ ಮೇಲೆ ಅವರ ಭೇಟಿ ನಿರ್ಧಾರವಾಗಲಿದೆ.
ಬಜೆಟ್‌ ವಿಷಯಗಳ ಬಗ್ಗೆ ಚರ್ಚೆ
ರಾಜ್ಯ ಬಜೆಟ್‌ ಸೇರಿದಂತೆ ಹಲವು ವಿಚಾರದ ಬಗ್ಗೆ ಸಂಸದರೊಂದಿಗೆ ಮಾತುಕತೆಗಾಗಿ ಸಭೆ ನಡೆಸಲಾಗುತ್ತಿದೆ. ಜೊತೆಗೆ ಜಲ ವಿವಾದ ಸಂಬಂಧ ವಕೀಲರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಮುಂದಿನ ತಿಂಗಳು ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಾಗೂ ಬೇರೆ ಯೋಜನೆ ಬಗ್ಗೆ ಚರ್ಚೆ ಮಾಡಲು ಸಂಸದರೊಂದಿಗೆ ಸಭೆ ನಡೆಸುತ್ತೇನೆ. ಕೇಂದ್ರ ಹಣಕಾಸು ಸಚಿವರ ಭೇಟಿಗೆ ಸಮಯ ಕೇಳಲಾಗಿದೆ. ರಾಜ್ಯ ಬಜೆಟ್‌, ಹಣಕಾಸಿನ ಸ್ಥಿತಿ, ಜಿಎಸ್‌ಟಿ ಇನ್ನಿತರ ವಿಚಾರದ ಬಗ್ಗೆ ಚರ್ಚಿಸಲಾಗುವುದು.’ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement