ಕರ್ನಾಟಕದ ಹಿಜಾಬ್‌ ವಿವಾದ: ಮುಸ್ಲಿಂ ಹುಡುಗಿಯರನ್ನು ಭಯಭೀತಗೊಳಿಸಲಾಗುತ್ತಿದೆ ಎಂದ ಪಾಕಿಸ್ತಾನ

ಇಸ್ಲಾಮಾಬಾದ್: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ತರಗತಿ ಕೊಠಡಿಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಬುಧವಾರ ವಾಗ್ದಾಳಿ ನಡೆಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಅವಕಾಶವನ್ನು ಭಾರತ ನಿರಾಕರಿಸುವ ಮೂಲಕ ಮುಸ್ಲಿಂ ಬಾಲಕಿಯರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಆರೋಪಿಸಿದ್ದಾರೆ. ಖುರೇಷಿ ಈ ಕ್ರಮವನ್ನು ದಬ್ಬಾಳಿಕೆ ಎಂದು ಕರೆದಿದ್ದಾರೆ ಮತ್ತು ಮುಸ್ಲಿಂ ಹುಡುಗಿಯರನ್ನು ಭಯಭೀತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ ಎಂದು ಹೇಳಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿ ಕರ್ನಾಟಕದ ಬಿಜೆಪಿ ಸರ್ಕಾರ ಕಳೆದ ವಾರ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉಡುಪಿಯ ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹೋಗದಂತೆ ತಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಗಲಾಟೆ ಇದೀಗ ರಾಜ್ಯಾದ್ಯಂತ ವ್ಯಾಪಿಸಿದ್ದು, ರಾಜ್ಯ ಹೈಕೋರ್ಟ್ ಈ ವಿಷಯದ ಕುರಿತು ವಿಚಾರಣೆ ನಡೆಸುತ್ತಿದೆ.
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಹುಡುಗರ ಕೇಸರಿ ಚಿಹ್ನೆಯ ನಡುವಿನ ಸಂಘರ್ಷದ ನಂತರ ಅಸ್ಥಿರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಿಸಿದೆ.
ಶಾಲಾ-ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತ ಮಂಡಳಿಗಳು ಮತ್ತು ಕರ್ನಾಟಕದ ಜನರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ನಾನು ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳವರೆಗೆ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ನಾನು ಆದೇಶಿಸಿದ್ದೇನೆ. ಸಂಬಂಧಪಟ್ಟವರೆಲ್ಲರೂ ಸಹಕರಿಸಲು ವಿನಂತಿಸಲಾಗಿದೆ.” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರವು ತರಗತಿ ಕೊಠಡಿಗಳಲ್ಲಿ ಹಿಜಾಬ್ ಅಥವಾ ಕೇಸರಿಗಳನ್ನು ಅನುಮತಿಸುವ ಪರವಾಗಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್ ಅಶೋಕ ಬುಧವಾರ ಹೇಳಿದ್ದಾರೆ.
ಸರ್ಕಾರವು ಹಿಜಾಬ್ ಅಥವಾ ಕೇಸರಿ ಪರವಾಗಿಲ್ಲ. ವಿದ್ಯಾರ್ಥಿಗಳು ರಸ್ತೆಗಳಲ್ಲಿ ತಮಗೆ ಬೇಕಾದುದನ್ನು ಧರಿಸಬಹುದು, ಆದರೆ ಶಾಲೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಶಾಲಾ-ಕಾಲೇಜುಗಳನ್ನು ಮುಚ್ಚಿದ್ದೇವೆ ಎಂದು ಸಚಿವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement