ಜೊಯಿಡಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜಾನಪದ ಭಂಡಾರ ಮಹಾದೇವ ವೇಳಿಪ ನಿಧನ

ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (90) ನಿಧನರಾಗಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದವರು. ಅವರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ಜಾನಪದ ರಾಜ್ಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಮಹಾದೇವ ವೇಳಿಪ ಅವರ ಬಾಯಲ್ಲಿ ಸಾವಿರಾರು ಜನಪದ ಹಾಡುಗಳಿದ್ದವು. ಇದಲ್ಲದೆ ನೂರಾರು ಬಗೆಯ ಸಸ್ಯಗಳು ಹಾಗೂ ಗೆಡ್ಡೆ ಗೆಣಸುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದ್ದರು ಹಾಗೂ ಅವುಗಳನ್ನು ಗುರುತಿಸಬಲ್ಲವರಾಗಿದ್ದರು.
ಅವರು ತಮ್ಮ ಹಾಡುಗಳ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು. 60 ವರ್ಷಗಳಿಂದ ಜಾನಪದ ಕಲಾವಿದರಾಗಿದ್ದು, ಕುಣಬಿ ಸಾಂಪ್ರದಾಯಿಕ ಕುಣಿತ, ಕಾಡು, ಪ್ರಾಣಿ ಮತ್ತು ಪ್ರಕೃತಿಗೆ ಸಂಬಂಧಿಸಿದ ಅನೇಕ ಕಥೆಗಳು, ತುಳಸಿ ಪದ, ರಾಮಾಯಯಣ, ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಹಾಡುಗಳನ್ನು ಇವರು ಹಾಡಬಲ್ಲರು. ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂತಹ ಅನೇಕ ಹಾಡುಗಳನ್ನು ಹಾಡುತ್ತಿದ್ದರು.
ಇದಲ್ಲದೆ ಕುಣಬಿಗಳ ಶಿಗ್ಮೋ ಖೇಳ ಹಾಡುಗಳು, ಕುಂಬ್ರಿ ಬೇಸಾಯ ಪದ್ಧತಿಗೆ ಸಂಬಂಧಿಸಿದ ಹಾಡುಗಳು, ಕಾಳಿ ನದಿಯ ಜನನಕ್ಕೆ ಸಂಬಂಧಿಸಿದ ಹಾಡುಗಳು, ಮಳೆ ಬರಲು ಪ್ರಾರ್ಥಿಸುವ ಹಾಡುಗಳು, ಕಾಡುಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಹಾಡುಗಳು ಇವರ ಬಾಯಲ್ಲಿದ್ದವು.
ಕಾಡಿನ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರನ್ನು ವನ್ಯ ತಜ್ಞ ಎಂದೂ ಕರೆಯುತ್ತಿದ್ದರು.. ಪರಿಸರ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಇವರು, ಅರಣ್ಯ ಇಲಾಖೆಯಿಂದ ಈ ಹಿಂದೆ ಬೇಣಗಳಲ್ಲಿ ಅಕೇಶಿಯವನ್ನು ನೆಡಲು ಬಂದಾಗ ಅದನ್ನು ತಡೆದು ಕಾಡು ಜಾತಿಯ ಗಿಡಗಳನ್ನು ನೆಡಿಸುವಲ್ಲಿ ಯಶಸ್ವಿಯಾಗಿದ್ದರು. ಡಿಗ್ಗಿ ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ತೆರಳುವ ಮೂಲಕ ಹೋರಾಟ ಮಾಡಿದ್ದರು. ಊರಿಗೆ ಶಾಲೆ ಬರಲು ಕಾರಣರಾಗಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement