ಕಾರವಾರ: ಭಾರತದ ಮೊದಲ ಬಹುಪಯೋಗಿ ನೌಕೆ ‘ಐಎನ್ಎಸ್ ಸಮರ್ಥಕ್’ (INS Samarthak) ಶುಕ್ರವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು. ಯುದ್ಧನೌಕೆಗಳ ನಿರ್ಮಾಣದಲ್ಲಿ ದೇಶೀಯ ಖಾಸಗಿ ಉದ್ಯಮದ ಪಾತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವದ ಮೈಲಿಗಲ್ಲಾಗಿದೆ.
ಕಾರವಾರದ ನೌಕಾನೆಲೆಯಲ್ಲಿ ನಡೆದ ನೌಕೆಯ ಸೇರ್ಪಡೆ ಸಮಾರಂಭದಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ಬಹುಪಯೋಗಿ ನೌಕೆಯಾದ ಐಎನ್ಎಸ್ ಸಮರ್ಥಕ್ಗೆ ಕಾರ್ಯಾರಂಭದ ಚಾಲನೆ ನೀಡಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ ಲಾಡ್, ಹಿರಿಯ ನೌಕಾ ಅಧಿಕಾರಿಗಳು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
‘ಐಎನ್ಎಸ್ ಸಮರ್ಥಕ್’ 100 ಮೀಟರ್ಗಿಂತಲೂ ಹೆಚ್ಚು ಉದ್ದವಿದ್ದು, ಸುಮಾರು 5,000 ಟನ್ ತೂಕ ಹೊಂದಿದೆ. ಈ ನೌಕೆಯು ಸುಮಾರು 7,200 ನಾಟಿಕಲ್ ಮೈಲುಗಳ ಕಾರ್ಯಾಚರಣಾ ವ್ಯಾಪ್ತಿಯನ್ನು ಹೊಂದಿದ್ದು, ದೂರದ ಸಮುದ್ರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಇದು ಅನುವು ಮಾಡಿಕೊಡುತ್ತದೆ. ವಿವಿಧ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಈ ನೌಕೆಯು ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ, ಅದರ ವೈವಿಧ್ಯಮಯ ಕಡಲ ಅಗತ್ಯಗಳಿಗೆ ಬೆಂಬಲ ನೀಡಲಿದೆ.
ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ತನ್ನ ಹಡಗು ನಿರ್ಮಾಣ ಘಟಕದಲ್ಲಿ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್ ಆ್ಯಂಡ್ ಟಿ) ಸಂಸ್ಥೆಯು ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಈ ನೌಕೆಯನ್ನು ನಿರ್ಮಿಸಿದೆ. ಇದರಲ್ಲಿ ಶೇ. 75ಕ್ಕೂ ಹೆಚ್ಚು ದೇಶೀಯ ತಂತ್ರಜ್ಞಾನ ಮತ್ತು ಸಾಮಗ್ರಿಗಳನ್ನು ಬಳಸಲಾಗಿದೆ. ಕಡಲ ಕಣ್ಗಾವಲು, ಶಸ್ತ್ರಾಸ್ತ್ರಗಳ ಪರೀಕ್ಷೆ ಹಾಗೂ ಮಾನವರಹಿತ ವ್ಯವಸ್ಥೆಗಳ ನಿಯೋಜನೆ ಸೇರಿದಂತೆ ಹಲವು ನೌಕಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಸೇರ್ಪಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು, ಐಎನ್ಎಸ್ ಸಮರ್ಥಕ್ನ ಕಾರ್ಯಾರಂಭವು ಭಾರತದ ಬೆಳೆಯುತ್ತಿರುವ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇನ್ನು ಕೇವಲ ಆಶಯವಾಗಿ ಉಳಿದಿಲ್ಲ; ಅದು ಕ್ರಮೇಣ ವಾಸ್ತವವಾಗುತ್ತಿದೆ. ಈ ಬೆಳವಣಿಗೆಯು ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಲಪಡಿಸುವುದರ ಜತೆಗೆ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ನಿರ್ಮಾಣದ ದೃಷ್ಟಿಕೋನಕ್ಕೆ ಕೊಡುಗೆ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ಕಡಲ ಪರಂಪರೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಚೋಳ ರಾಜವಂಶದ ನೌಕಾ ಸಂಪ್ರದಾಯಗಳನ್ನು ಉಲ್ಲೇಖಿಸಿದರು. ಈ ಸಂಪ್ರದಾಯಗಳು ಹಿಂದೂ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದಾದ್ಯಂತ ಭಾರತದ ಕಡಲ ಪ್ರಭಾವವನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು ಎಂದು ಹೇಳಿದರು.
ಐಎನ್ಎಸ್ ಸಮರ್ಥಕ್ನ ಕಾರ್ಯಾಚರಣಾ ಸಾಮರ್ಥ್ಯಗಳನ್ನು ವಿವರಿಸಿದ ಅವರು, ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಸಂವೇದಕಗಳು ಮತ್ತು ಉದಯೋನ್ಮುಖ ಕಡಲ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಹಾಗೂ ಮೌಲ್ಯಮಾಪನ ಮಾಡಲು ಈ ನೌಕೆಯು ಬಹುಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು. ಕಡಲ ಕಣ್ಗಾವಲು ಮತ್ತು ವಿಚಕ್ಷಣ, ಕಡಲಾಚೆಯ ಗಸ್ತು, ಗುರಿಗಳ ಉಡಾವಣೆ, ಮಾನವರಹಿತ ವ್ಯವಸ್ಥೆಗಳ ನಿಯೋಜನೆ ಹಾಗೂ ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೂ ಇದು ನೆರವಾಗಲಿದೆ ಎಂದು ತಿಳಿಸಿದರು.
ಕಾರವಾರದ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಿದ ಉಪರಾಷ್ಟ್ರಪತಿಗಳು, ಇಲ್ಲಿನ ಆಳವಾದ ನೈಸರ್ಗಿಕ ಬಂದರು ಮತ್ತು ಅರೇಬಿಯನ್ ಸಮುದ್ರದ ಸಾಮೀಪ್ಯವು ಭಾರತದ ಕಡಲ ಭದ್ರತಾ ಮೂಲಸೌಕರ್ಯದ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮಾತನಾಡಿ, ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ಎಲ್ ಆ್ಯಂಡ್ ಟಿ ಸಂಸ್ಥೆಯ ಹಡಗುಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಸಮರ್ಥಕ್ನಲ್ಲಿ ಶೇ. 75ಕ್ಕೂ ಹೆಚ್ಚು ದೇಶೀಯ ತಂತ್ರಜ್ಞಾನ ಮತ್ತು ಸಾಮಗ್ರಿಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.
ಸಮರ್ಥಕ್ನ ಸೇರ್ಪಡೆಯು ಆತ್ಮನಿರ್ಭರ ಭಾರತದ ಗುರಿಯತ್ತ ಸಾಗುತ್ತಿರುವ ದೇಶದ ಪ್ರಯತ್ನಗಳಿಗೆ ಮಹತ್ವದ ಕೊಡುಗೆಯಾಗಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ನಾಲ್ಕು ಬಹುಪಯೋಗಿ ನೌಕೆಗಳ ಪೈಕಿ ಸಮರ್ಥಕ್ ಮೊದಲನೆಯದಾಗಿದೆ. ನೌಕಾಪಡೆಯ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದ್ದು, ಆಯಕಟ್ಟಿನ ಮಹತ್ವ ಹೊಂದಿರುವ ಕಾರ್ಯಾಚರಣೆಗಳಿಗೆ ಸೂಕ್ತವಾದ ನೌಕೆಯಾಗಿದೆ ಎಂದು ಹೇಳಿದರು.
ವಿವಿಧ ಕಾರ್ಯಾಚರಣೆಗಳಿಗೆ ಬಳಕೆ
ಸಮರ್ಥಕ್ ನೌಕೆಯನ್ನು ಹಲವು ಬಗೆಯ ಕಾರ್ಯಾಚರಣೆಗಳು ಮತ್ತು ನೆರವು ಸೇವೆಗಳನ್ನು ನಿರ್ವಹಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳ ಪರೀಕ್ಷೆ, ಮಾನವರಹಿತ ಸ್ವಯಂಚಾಲಿತ ವ್ಯವಸ್ಥೆಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳು, ಕಡಲ ಮೇಲ್ವಿಚಾರಣೆ ಹಾಗೂ ಗಸ್ತು ಕಾರ್ಯಗಳಿಗೆ ಇದನ್ನು ಬಳಸಬಹುದಾಗಿದೆ.
ನೌಕೆಯಲ್ಲಿ ಅತ್ಯಾಧುನಿಕ ಡೈನಾಮಿಕ್ ಪೊಸಿಷನಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಮುದ್ರದಲ್ಲಿ ಯುದ್ಧನೌಕೆಗಳ ಅಭ್ಯಾಸದ ವೇಳೆ ಬಳಸುವ ಗುರಿಗಳನ್ನು ಉಡಾವಣೆ ಮಾಡುವ ಹಾಗೂ ಮರಳಿ ಹಿಂಪಡೆಯುವ ಸಾಮರ್ಥ್ಯವೂ ಇದಕ್ಕಿದೆ. ಅಭಿವೃದ್ಧಿ ಹಂತದಲ್ಲಿರುವ ದೇಶೀಯ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಪರೀಕ್ಷಿಸಲು ಇದು ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಅಡ್ಮಿರಲ್ ಸ್ವಾಮಿನಾಥನ್ ವಿವರಿಸಿದರು.
ಸಮರ್ಥಕ್ನ ಉಪಯುಕ್ತತೆ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ದೀರ್ಘಕಾಲ ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಇತರ ನೌಕೆಗಳಿಗೆ ಅಗತ್ಯ ನೆರವು ನೀಡುವ ವ್ಯವಸ್ಥೆಗಳಿಂದಾಗಿ, ನೌಕಾಪಡೆಯು ವಿವಿಧ ಆಯಕಟ್ಟಿನ ಪ್ರದೇಶಗಳಲ್ಲಿ ದೀರ್ಘಾವಧಿಯವರೆಗೆ ತನ್ನ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲು ಇದು ನೆರವಾಗಲಿದೆ ಎಂದು ನೌಕಾಪಡೆಯ ಮುಖ್ಯಸ್ಥರು ತಿಳಿಸಿದರು.
ತುರ್ತು ಸಂದರ್ಭಗಳಲ್ಲೂ ನೆರವು
ಸಮರ್ಥಕ್ನಲ್ಲಿ ಭಾರೀ ನೌಕೆಗಳನ್ನು ಎಳೆಯುವ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ನೌಕೆಗಳಿಗೆ ನೆರವು ನೀಡಲು ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಈ ಸೌಲಭ್ಯಗಳು ಸಹಕಾರಿಯಾಗಲಿವೆ.
ಇದಲ್ಲದೆ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೂ ಈ ನೌಕೆಯನ್ನು ಬಳಸಬಹುದು. ಯುದ್ಧೇತರ ಸಂದರ್ಭಗಳಲ್ಲಿ ನಾಗರಿಕರನ್ನು ಅಪಾಯದ ಪ್ರದೇಶಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆಗಳಿಗೂ ಇದು ನೆರವಾಗಲಿದೆ ಎಂದು ಅಡ್ಮಿರಲ್ ಸ್ವಾಮಿನಾಥನ್ ಹೇಳಿದರು.
ಸಮರ್ಥಕ್ನ ಸೇರ್ಪಡೆಯು ದೇಶೀಯ ಹಡಗು ನಿರ್ಮಾಣ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗಿನ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ಭಾರತೀಯ ನೌಕಾಪಡೆಯ ಪ್ರಯತ್ನಗಳಿಗೆ ಹೊಸ ವೇಗ ನೀಡಿದೆ. ಸ್ವದೇಶಿ ತಂತ್ರಜ್ಞಾನಗಳ ಅಭಿವೃದ್ಧಿ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಭಾರತದ ಕಡಲ ಕೈಗಾರಿಕಾ ನೆಲೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವದ ಹೆಜ್ಜೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ