ಹಿಜಾಬ್‌ ವಿವಾದ: ತಕ್ಷಣವೇ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಮುಂದಾಗಿ-ಹೊರಟ್ಟಿ

ಹುಬ್ಬಳ್ಳಿ: ಹಿಜಾಬ್‌ ಪ್ರಕರಣದ ಕುರಿತು ನಾವು ನ್ಯಾಯಾಲಯದ ತೀರ್ಪಿನ ಮೇಲೆ ನಂಬಿಕೆಯನ್ನು ಇಡಬೇಕಾಗುತ್ತದೆ. ವಿವಾದದಿಂದ ಮಕ್ಕಳ ಮನಸ್ಸಿನ ಮೇಲೆ ಉಂಟಾಗುವ ದ್ವೇಷ, ಸಿಟ್ಟು ಮನಸ್ಸಿನಲ್ಲಿಯೇ ಉಳಿಯಬಹುದು. ಈ ಬಗ್ಗೆ ಮುಂದಾಲೋಚನೆಯಿಂದ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು ಶಾಂತಿ ಕಾಪಾಡುವುದು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡುವುದು ಅತ್ಯಂತ ಮುಖ್ಯ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಾಡಿನಾದ್ಯಂತ ಭುಗಿಲೆದ್ದಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇನ್ನಷ್ಟು ಗಂಭೀರ ಪರಿಸ್ಥಿತಿ ನಿರ್ಮಾಣ ಉಂಟು ಮಾಡಬಹುದೆಂದು ರಾಜ್ಯದ ಎಲ್ಲಾ ಪಾಲಕರಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಬಹಳ ಗಂಭೀರವಾದತಹ ಚರ್ಚೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ವಿನಾಕಾರಣ ಈ ದ್ವೇಷ, ಅಸೂಯೆ ನಮ್ಮ ಕಣ್ಣು ಮುಂದೆಯೇ ನಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಅವರು, ತಂದೆ, ತಾಯಿಗಳು ರಾಜಕೀಯವನ್ನು ದೂರವಿಟ್ಟು ತಮ್ಮ ಮಕ್ಕಳಿಗೆ ಜವಾಬ್ದಾರಿಯಿಂದ ಇರುವಂತೆ ತಮ್ಮ ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ಇಲ್ಲದಿದ್ದರೆ ಶಾಲಾ ಕಾಲೇಜುಗಳು ರಣರಂಗವಾಗಿ ಮಾರ್ಪಾಡಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾನು ಸರಕಾರಕ್ಕೆ ಸಲಹೆ ಕೊಡುವುದೇನೆಂದರೆ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಪಾಲಕರನ್ನು, ಎಲ್ಲ ಪಕ್ಷಗಳ ಮುಖಂಡರನ್ನು ಸಾರ್ವಜನಿಕ ಜೀವನದಲ್ಲಿ ಒಳ್ಳೆಯದನ್ನು ಬಯಸುತ್ತಿರುವಂತಹ ಜನರನ್ನು ಕೂಡಿಸಿ ಸಭೆ ಮಾಡಿ ವಾತಾವರಣ ತಿಳಿ ಮಾಡಬೇಕು. ನಮ್ಮ ರಾಜ್ಯದ ಈ ವಿಷಯ ಲೋಕಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆಯ ವಿಷಯವಾಯಿತು. ಅಲ್ಲದೇ ಪ್ರಕರಣ  ಸರ್ವೋಚ್ ನ್ಯಾಯಾಲಯದ ವರೆಗೆ ಹೋಗಿದೆ. ಇದರಿಂದ ನಮ್ಮ ರಾಜ್ಯದ ಮರ್ಯಾದೆ ಎಲ್ಲಿಗೆ ಬರುತ್ತದೆ ಎಂಬುದನ್ನು ಸಂಬಂಧಪಟ್ಟವರು ತಿಳಿದುಕೊಳ್ಳಬೇಕು. ಕುವೆಂಪು ಅವರು ಹೇಳಿದಂತೆ ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಿ ಇರಬೇಕು. ಯಾವುದೇ ಕಾರಣಕ್ಕೂ ಸಮಾಜದ ಸ್ವಾಸ್ಥ್ಯ ಹಾಳಾಗಬಾರದೆಂಬುದೇ ನನ್ನ ಉದ್ದೇಶ. ನಾನು ಹೇಳಿದ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಗಣಿಸಿ ಇದಕ್ಕೆ ಒಂದು ಶಾಂತಿಯುತ ಸಮಾಧಾನಕರ ದಾರಿ ಹುಡುಕಿ ರಾಜ್ಯದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement