ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದ ಮಾದರಿ ರಸ್ತೆಯ ನಾಗರಾಜ ನಾಯ್ಕ ಎಂಬವರ ಮನೆಗೆ ಶುಕ್ರವಾರ ಚಿರತೆ ನುಗ್ಗಿದ್ದು, ಮನೆಯೊಳಗೆ ಅಡಗಿ ಕುಳಿತದೆ. ಅದು ಇಬ್ಬರ ಮೇಲೆ ದಾಳಿ ನಡೆಸಿದ್ದು, ಒಬ್ಬರಿಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮದ್ಯಾಹ್ನ 4 ಗಂಟೆ ಸುಮಾರಿಗೆ ಬಾಡದ ಮಾದರಿ ರಸ್ತೆ ಬಳಿ ಚಿರತೆ ಓಡಾಡುತ್ತಿರುವುದನ್ನು ಹಲವರು ಗಮನಿಸಿದ್ದಾರೆ. ಚಿರತೆ ಬಂದ ಸುದ್ದಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವುದರ ಒಳಗೆ ಅದು ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆಯು ಈಶ್ವರ ನಾಯ್ಕ ಮತ್ತು ಮಾಬ್ಲೇಶ್ವರ ಅಂಬಿಗ ಎಂಬವರ ಮೇಲೆ ದಾಳಿ ಮಾಡಿದೆ. ಒಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ತಕ್ಷಣವೇ ಕುಮಟಾದ ಸರ್ಕಾರಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರ ಮೇಲೆದಾಳಿ ಮಾಡಿದ ನಂತರ ಚಿರತೆ ಮರ ಹತ್ತಿ ಕುಳಿತಿತ್ತು. ತಕ್ಷಣವೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳೀಯರು ಚಿರತೆ ಕಾಯುತ್ತಿರುವಾಗಲೇ ಅಲ್ಲಿಂದಿಳಿದು ಮನೆಯೊಂದರ ಒಳಕ್ಕೆ ಚಿರತೆ ನುಗ್ಗಿದೆ, ಮನೆಯಲ್ಲಿರುವ ನಾಲ್ವರು ಮತ್ತೊಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ತಮ್ಮನ್ನು ರಕ್ಷಿಸಿಕೊಂಡಿದ್ದಾರೆ.
ಮನೆಯ ಯಜಮಾನ ನಾಗರಾಜ ನಾಯ್ಕ ಅವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದು ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಮನೆಯ ಒಳಗಿನ ಕೊಠಡಿ ಇತ್ಯಾದಿ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಮನೆಯ ಹಿಂದುಗಡೆ ಮತ್ತು ಮನೆಯ ಮುಂದಿನ ರಸ್ತೆಯಲ್ಲಿ ಚಿರತೆ ದಾಳಿ ಮಾಡದಂತೆ ಹಾಗೂ ತಪ್ಪಿಸಿಕೊಳ್ಳದಂತೆ ಕಾಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮನೆಯ ಎರಡು ಕಡೆಯಲ್ಲಿ ಎರಡು ಬೋನು ಅಳವಡಿಸಿದ್ದಾರೆ. ಚಿರತೆ ಹಿಡಿಯಲು ವಿಶೇಷ ಬಲೆ ತರಿಸಿದ್ದು ಹಿಡಿಯುವ ಪ್ರಯತ್ನ ನಡೆಸಿದ್ದಾರೆ.

ಚಿರತೆ ನೋಡಿರುವ ಸ್ಥಳೀಯರಾದ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಈಶ್ವರ ಪಟಗಾರ ಪ್ರಕಾರ ಚಿರತೆ ಅತ್ಯಂತ ಸಿಟ್ಟಲ್ಲಿದ್ದಂತೆ ತೋರುತ್ತಿದೆ ಹಾಗೂ ಹಸಿವಿನಿಂದ ಕಂಗೆಟ್ಟಂತೆ ಕಾಣುತ್ತಿದೆ. ಚಿರತೆ ಹೆದರಿರುವ ಸಾಧ್ಯತೆ ಇದ್ದು ಮನೆಯಿಂದ ಹೊರಗಡೆ ಬಂದರೆ ಜನರ ಮೇಲೆ ದಾಳಿಮಡುವ ಸಾಧ್ಯತೆ ಇರುವುದರಿಂದ ಕುಮಟಾ ಪಿಎಸ್ಐ ಮಂಜುನಾಥ ಸ್ಥಳಕ್ಕೆ ಆಗಮಿಸಿದ್ದು ಚಿರತೆ ಅಡಗಿಕೊಂಡಿರುವ ನಾಗರಾಜ ನಾಯ್ಕ ಅವರ ಮನೆಯ ರಸ್ತೆಯಲ್ಲಿರುವ ಜನರನ್ನು ದೂರಕ್ಕೆ ಹೋಗುವಂತೆ ಸೂಚನೆ ನೀಡಿ ಜನರನ್ನು ಚದುರಿಸುತ್ತಿದ್ದಾರೆ. ಕರಾವಳಿ ಪೊಲೀಸ್ ಪಡೆಯ ಮೋಹನ ಎಂಬವರು ಸ್ಥಳದಲ್ಲಿದ್ದು ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳಾದ ರಾಘವೇಂದ್ರ ನಾಯ್ಕ ಹಾಗೂ ಸಿಬ್ಬಂದಿಗೆ ಸಹಕಾರ ನೀಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

ಮಾದರಿ ರಸ್ತೆ ಪ್ರದೇಶಕ್ಕೆ ಚಿರತೆ ಬಂದಿದ್ದು ಜನರಿಗೆ ಆಶ್ಚರ್ಯ ತರಿಸಿದೆ. ಇದು ಅತ್ಯಂತ ಜನನಿಬಿಡ ಪ್ರದೇಶ ವಾಗಿದ್ದು ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಹಾಗೂ ಪೂರ್ವ ದಲ್ಲಿ ಅಘನಾಶನಿ ಹಿನ್ನೀರಿನ ಘಜನಿ ಪ್ರದೇಶವಿದೆ. ಆದರೂ ಈ ಪ್ರದೇಶಕ್ಕೆ ಹಗಲು ಹೊತ್ತಿನಲ್ಲಿ ಚಿರತೆ ಬಂದಿದ್ದು ಆಶ್ಚರ್ಯ ತರಿಸಿದೆ. ಅದು ನೀರು ಹಾಗೂ ಆಹಾರ ಅರಸುತ್ತ ದಾರಿ ತಪ್ಪಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement