ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಪೆನ್‍ಡ್ರೈವ್ ಪ್ರಕರಣದ ಹಿಂದೆ ಷಡ್ಯಂತ್ರವಿದ್ದು, ಇದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇದ್ದಾರೆ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಹಂಚಿಕೆ ಮಾಡುವ ಗೇಮ್ ಪ್ಲ್ಯಾನಿಂಗ್ ಸಿದ್ದರಾಮಯ್ಯ ಸರ್ಕಾರದ್ದು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆಯನ್ನ ಗೌಪ್ಯವಾಗಿ ಕರೆದಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರನ್ನು ಆರೋಪಿಗಳನ್ನಾಗಿ ಮಾಡಬೇಕು, ಯಾರನ್ನು ಬಿಡಬೇಕು ಎಂಬ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಹಾಸನದ ನನ್ನ ಗೃಹ ಕಚೇರಿಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದ. ಎಸ್ಐಟಿಗೆ ನನ್ನ ಬಳಿ ಇರುವ ದಾಖಲೆ ಕೊಟ್ಟಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ನಿಜವಾದ ಆರೋಪಿಗಳನ್ನು ಬಚ್ಚಿಟ್ಟಿದೆ. ಸಂತ್ರಸ್ತರಿಗೆ ಹಣ ನೀಡಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಸಿಬಿಐಗೆ ನಾನು ಎಲ್ಲಾ ದಾಖಲೆ ಕೊಡುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

ಒಬ್ಬ ವ್ಯಕ್ತಿ ವಕೀಲನ ಹತ್ತಿರ ಬಂದಾಗ, ವಕೀಲ ವೃತ್ತಿಯಲ್ಲಿ ಏನು ಮಾಡಬೇಕೋ ಅದನ್ನು ನಾನು ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್ ಡ್ರೈವ್ ಹಾಗೂ ‌ಕೆಲ ಡಾಕ್ಯುಮೆಂಟ್ ಕೊಟ್ಟಿದ್ದ. ಅಶ್ಲೀಲ ವಿಡಿಯೋ ಕ್ಲಿಪ್‌ ಹಾಗೂ ಪತ್ರಿಕೆ ಪೇಪರ್ ಅನ್ನು ತಂದು ಕೊಟ್ಟಿದ್ದ. ಇದಕ್ಕೆ ಪೂರಕವಾದ ಕೆಲ ದಾಖಲೆ ‌ಕೊಡಿ ಎಂದು ಕೇಳಿದ್ದೆ ಎಂದು ಹೇಳಿದ ಅವರು, ಕಾರ್ತಿಕ್ ತಮ್ಮ ಮನೆಗೆ ಯಾವಾಗ ಬಂದ? ನನ್ನ ಮನೆಯಲ್ಲಿ ‌ಕುಳಿತು‌ ಮಾತನಾಡಿರುವ ವೀಡಿಯೊವನ್ನು ಸಿಬಿಐಗೆ ಕೊಡುತ್ತೇನೆ ಎಂದು ವಕೀಲ ದೇವರಾಜೇಗೌಡ ಹೇಳಿದರು. ಹಾಗೂ ವೀಡಿಯೊ ಪ್ರದರ್ಶನ ‌ಮಾಡಿದರು.

ನನಗೆ ಕ್ಯಾಬಿನೆಟ್ ಪೋಸ್ಟ್ ಕೊಡುವ ಆಫರ್ ಮಾಡಿದರು. ಕಾಂಗ್ರೆಸ್ ಕಡೆಯಿಂದ ನನಗೆ ಬಿಗ್ ಆಫರ್ ಬಂದಿದೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ಸ್ಥಾನಮಾನದ ಹುದ್ದೆಯ ಆಫರ್ ಕೊಟ್ಟಿದ್ದಾರೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಕಡೆಯಿಂದ ಬಂದ ಜನ ಈ ಆಫರ್ ಕೊಟ್ಟಿದ್ದಾರೆ ಎಂದು ತಿಳಿಸಿದ ವಕೀಲ ದೇವರಾಜೇಗೌಡ, ಸುದ್ದಿಗೋಷ್ಠಿ ನಡುವೆಯೇ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್​ ಅವರನ್ನು ಭೇಟಿಯಾಗಿದ್ದು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆಮಿಷವೊಡ್ಡಿದ ಸಂಭಾಷಣೆಯ ಧ್ವನಿ ಆಡಿಯೊವನ್ನು ದೇವರಾಜೇಗೌಡ ಬಿಡುಗಡೆ ಮಾಡಿದರು.
ಪೆನ್ ಡ್ರೈವ್ ಕಥಾನಾಯಕ ಕಾಂಗ್ರೆಸ್ ಸರ್ಕಾರವಾಗಿದೆ. ಇದರ ರೂವಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ ಎಂದು ಆರೋಪಿಸಿದರು. ಎಸ್‌ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ಯಾಕೆಂದರೆ ಎಸ್ ಐಟಿ ಮುಂದೆ ನಾನು ಹೇಳಿಕೆ ನೀಡಿದಾಗ ಎಸ್‍ಪಿಯೊಬ್ಬರು ಶಿವಕುಮಾರ   ಹೆಸರು ವಾಪಸ್ ಪಡೆಯಿರಿ ಅಥವಾ ಡಿಲೀಟ್‌ ಮಾಡಿ ಎಂದರು. ಹೀಗಾಗಿ ಇದರ ತನಿಖೆಯನ್ನು ಸಿಬಿಐಗೆ ಕೊಟ್ಟರೆ, ನಾನು ಸಂಪೂರ್ಣ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement