ಕೋಲಾರ: ಮದುವೆಯಾಗಬೇಕಿದ್ದ ಯುವತಿಯೊಬ್ಬಳ ಜೀವನದಲ್ಲಿ ವಿಧಿ ಆಟವಾಡಿದೆ. ತನ್ನ ಮದುವೆಯ ಆರತಕ್ಷತೆಯಲ್ಲೇ ಮದುಮಗಳು ಕುಸಿದು ಬಿದ್ದು ತೀವ್ರ ಅಸ್ವಸ್ಥಳಾಗಿದ್ದಾಳೆ. ತಕ್ಷಣವೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮದುಮಗಳ ಬ್ರೈನ್ ಡೆಡ್ (brain dead) ಆಗಿದೆ ಎಂದು ಘೋಷಣೆ ಮಾಡಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಚೈತ್ರಾ (26) ಬ್ರೈನ್ ಡೆಡ್ ಆಗಿ ಅಸ್ವಸ್ಥಳಾದ ಮದುಮಗಳು. ಚೈತ್ರಾ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಡಚೆರವು ಗ್ರಾಮದ ಕೃಷಿಕ ರಾಮಪ್ಪ ಎಂಬವರ ಮಗಳು. ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿ, ಕೈವಾರದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 6 ರಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ಆರತಕ್ಷತೆ ನಡೆದಿತ್ತು. ಹೊಸಕೋಟೆ ಮೂಲದ ಯುವಕನೊಂದಿಗೆ ಚೈತ್ರಾ ಮದುವೆ ನಿಶ್ಚಯವಾಗಿತ್ತು. ಆದರೆ ಆರತಕ್ಷತೆಯಲ್ಲೇ ಕುಸಿದು ಬಿದ್ದ ಚೈತ್ರಾ ಆಸ್ಪತ್ರೆಗೆ ದಾಳಲಾಗಬೇಕಾಯಿತು. ನಿನ್ನೆ, ಶುಕ್ರವಾರ ನಿಮ್ಹಾನ್ಸ್ ವೈದ್ಯರು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿದ್ದಾರೆ. ಬಳಿಕ ಕುಟುಂಬಸ್ಥರು ಚೈತ್ರಾಳ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಚೈತ್ರಾಳ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿ, ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ