ನಾಳೆಯಿಂದ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಫೆಬ್ರವರಿ 14, ಸೋಮವಾರದಿಂದ ಆರಂಭವಾಗಲಿದ್ದು, 10 ದಿನಗಳ ಕಾಲ ನಡೆಯಲಿದೆ.
ವರ್ಷದ ಮೊದಲ ಅಧಿವೇಶನ ಇದಾಗಿದ್ದು, ಮೊದಲ ದಿನ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ವಿಧಾನ ಮಂಡಲದ ಜಂಟಿ ಅಧಿವೇಶನದ ಕಾರ್ಯಕಲಾಪಗಳ ಬಗ್ಗೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.
ಈ ವಿಧಾನ ಮಂಡಲದ ಅಧಿವೇಶನದಲ್ಲಿ ಎರಡು ವಿಧೇಯಕಗಳು ಮಂಡನೆಯಾಗಲಿದೆ. ಈ ಅಧಿವೇಶನದಲ್ಲಿ ಕರ್ನಾಟಕ ಸ್ಟಾಂಪ್ಸ್ ಎರಡನೇ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ (ಅಧ್ಯಾದೇಶ) ತಿದ್ದುಪಡಿಗಳು ಮಂಡನೆಯಾಗಲಿವೆ ಎಂದರು.
ಅಧಿವೇಶನಕ್ಕೆ ೨೦೬೨ ಪ್ರಶ್ನೆಗಳು ಸದಸ್ಯರಿಂದ ಬಂದಿವೆ ಎಂದು ಅವರು ವಿವರ ನೀಡಿದರು.
ಕೊರೊನಾ ನಿಯಮಗಳನ್ನು ಪಾಲಿಸಿ ಅಧಿವೇಶನ ನಡೆಯಲಿದ್ದು, ಕೊರೊನಾ ಅಲೆ ತಗ್ಗಿರುವ ಕಾರಣ ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅಧಿವೇಶನದ ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಲಿದ್ದು, ನಂತರ ಸದನವನ್ನು ಕೆಲ ಕಾಲ ಮುಂದೂಡಿ, ಸಂತಾಪ ಸೂಚನಾ ಕಲಾಪಗಳು ನಡೆಯಲಿವೆ ಎಂದು ಹೇಳಿದರು.
ಚುನಾವಣಾ ಸುಧಾರಣೆ: ವಿಶೇಷ ಚರ್ಚೆ
ಈ ಅಧಿವೇಶನದಲ್ಲಿ ಚುನಾವಣೆ ವ್ಯವಸ್ಥೆಯ ಸುಧಾರಣೆ ಬಗ್ಗೆ ವಿಶೇಷ ಚರ್ಚೆಗೆ ತೀರ್ಮಾನ ಮಾಡಿದ್ದೇವೆ. ಯಾವಾಗ ಈ ವಿಶೇಷ ಚರ್ಚೆ ನಡೆಸಬೇಕು, ಎಷ್ಟು ದಿನ ಇದಕ್ಕೆ ಸಮಯ ನಿಗದಿ ಮಾಡಬೇಕು ಎಂಬುದರ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕಾಗೇರಿ ಹೇಳಿದರು.
ಚುನಾವಣಾ ಸುಧಾರಣೆ ಅವಶ್ಯಕತೆ ಇದೆ. ಹಾಗಾಗಿ ಎಲ್ಲರ ಜತೆ ಚರ್ಚಿಸಿ ಚುನಾವಣೆ ಸುಧಾರಣೆಯ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ. ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಈ ಚರ್ಚೆಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಸಭಾಪತಿ ಹೊರಟ್ಟಿ ಹೇಳಿಕೆ..
ಈ ಅಧಿವೇಶನದಲ್ಲಿ ಧರಣಿ ಸಂದರ್ಭದಲ್ಲಿ ಧರಣಿ ನಿರತ ಸದಸ್ಯರು ಭಿತ್ತಿ ಪತ್ರ ಮತ್ತು ಘೋಷಣೆ ಕೂಗುವುದನ್ನು ನಿರ್ಬಂಧಿಸಲಾಗಿದೆ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮೇಲ್ಮನೆಯ ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನಿಯಮಗಳ ಪಾಲನೆಗೆ ಸದಸ್ಯರಿಗೆ ಸೂಚನೆ ನೀಡಿದ್ದು, ಧರಣಿ ಸಮಯದಲ್ಲಿ ಸದನದ ಬಾವಿಯಲ್ಲಿ ಬಿತ್ತಿ ಪತ್ರ ಪ್ರದರ್ಶಿಸುವಂತಿಲ್ಲ ಎಂದು ತಿಳಿಸಿದರು.
ಚುನಾವಣೆ ಸುಧಾರಣೆಯ ಬಗ್ಗೆ ಚರ್ಚೆ ಹಮ್ಮಿಕೊಳ್ಳುವ ಚಿಂತನೆ ಇದೆ. ಸರ್ಕಾರ ಒಪ್ಪಿಕೊಂಡರೆ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೊರಟ್ಟಿ ತಿಳಿಸಿದರು.
ಚುನಾವಣೆಯಲ್ಲಿ ಸೋತವರನ್ನು ಮೇಲ್ಮನೆಗೆ ಕಳುಹಿಸಲಾಗುತ್ತಿದೆ. ಸಾಹಿತಿಯಂತೆ ಪುಸ್ತಕ ಬರೆದ ರಾಜಕಾರಣಿಯನ್ನೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗುತ್ತಿದೆ. ಯಾವ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಇದ್ದಾರೋ ಅವರನ್ನು ಆಯ್ಕೆ ಮಾಡುವುದು ಸೂಕ್ತ. ಯಾವುದೇ ಪಕ್ಷ, ಯಾವುದೇ ಸರ್ಕಾರ ಇದ್ದರೂ ಸಾಧಕರನ್ನೆ ವಿಧಾನ ಪರಿಷತ್‌ಗೆ ಕಳುಹಿಸಬೇಕು ಎಂದರು.
ಹಿಜಾಬ್-ಕೇಸರಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳನ್ನು ಅಡ್ಡದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ರಾಜ್ಯಪಾಲರಿಗೆ ಆಹ್ವಾನ
ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶನಿವಾರ ರಾಜ್ಯಪಾಲರಿಗೆ ಆಹ್ವಾನ ನೀಡಿದರು.
ರಾಜಭವನಕ್ಕೆ ತೆರಳಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಸಭಾಪತಿ ಮತ್ತು ವಿಧಾನಸಭಾಧ್ಯಕ್ಷರು ರಾಜ್ಯಪಾಲರನ್ನು ಕೋರಿದರು.
ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿರುವ ರಾಜ್ಯಪಾಲರು ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಅದ್ದೂರಿ ಮೆಟ್ಟಿಲು (ಗ್ರ್ಯಾಂಡ್ ಸ್ಟೆಪ್ಸ್) ಗಳನ್ನು ಏರಿ ವಿಧಾನಸೌಧ ಪ್ರವೇಶಿಸಲಿದ್ದಾರೆ.
ಈ ಮೊದಲು ರಾಜ್ಯಪಾಲರಾಗಿದ್ದ ವಜುಬಾಯಿ ರೂಢಾಬಾಯಿ ವಾಲಾ ಅವರು ರಾಜಭವನದಿಂದ ವಿಧಾನಸೌಧದ ಪೂರ್ವ ದ್ವಾರದವರೆಗೂ ಕಾರಿನಲ್ಲೇ ಬಂದು ನಂತರ ಲಿಫ್ಟ್ ಮೂಲಕ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ವಿಧಾನಸಭೆಯ ಸದನಕ್ಕೆ ಬರುತ್ತಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement