ಹಿಜಾಬ್‌ ವಿವಾದ: ಬಿಗಿ ಭದ್ರತೆಯಲ್ಲಿ ರಾಜ್ಯಾದ್ಯಂತ ನಾಳೆ ಪ್ರೌಢಶಾಲೆಗಳು ಆರಂಭ

ಬೆಂಗಳೂರು: ಹಿಜಾಬ್ ವಿವಾದದಿಂದ ಬಂದ್ ಆಗಿದ್ದ ಪ್ರೌಢಶಾಲೆಗಳು ನಾಳೆ, ಸೋಮವಾರದಿಂದ ಆರಂಭವಾಗುತ್ತಿದ್ದು, ಶಾಂತಿಯುತವಾಗಿ ತರಗತಿ ನಡೆಯುವಂತಾಗಲು ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಶಾಲೆಗಳ ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು-ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ, ಪ್ರತಿಭಟನೆ, ಮೆರವಣಿಗೆ ಯಾವುದಕ್ಕೂ ಅವಕಾಶ ಇಲ್ಲ. ಹಾಗೆಯೇ ಹೈಕೋರ್ಟಿನ ಆದೇಶದಂತೆ ವಿದ್ಯಾರ್ಥಿಗಳು ಧಾರ್ಮಿಕ ಗುರುತನ್ನು ಸಂಕೇತಿಸುವ ವಸ್ತ್ರವನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ಹೀಗಾಗಿ ಶಾಲಾ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಶಾಲೆಗಳಿಗೆ ಹಾಜರಾಗಬೇಕಿದೆ.
ಸದ್ಯಕ್ಕೆ ೯ರಿಂದ ೧೦ನೇ ತರಗತಿಗಳು ಮಾತ್ರ ಸೋಮವಾರ ಕಾರ್ಯಾರಂಭ ಮಾಡುತ್ತಿದ್ದು, ಕಾಲೇಜುಗಳಿಗೆ ೧೬ರ ವರೆಗೆ ರಜೆ ವಿಸ್ತರಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಫೆ. ೧೪ರ ನಂತರ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಶಾಲಾ-ಕಾಲೇಜುಗಳನ್ನು ಶಾಂತಿಯುವ ವಾತಾವರಣದಲ್ಲಿ ನಡೆಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖಾಧಿಕಾರಿಗಳ ಜೊತೆ ವೀಡಿಯೊ ಸಂವಾದ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬರು ಹೈಕೋರ್ಟ್‌ ಆದೇಶ ಪಾಲಿಸಬೇಕು. ಹೊರಗಿನ ಪ್ರಚೋದನೆಗಳಿಗೆ ಒಳಗಾಗದಂತೆ ಗಮನ ಹರಿಸಬೇಕು.ಮುಖ್ಯವಾಗಿ ಸೂಕ್ಷ್ಮ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಮುಖ ಶಾಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಸಣ್ಣ ಘಟನೆಯನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸಭೆಯನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ. ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಶಾಲೆಗಳನ್ನು ಗುರುತಿಸಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆಯೂ ಸೂಚನೆ ನೀಡಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲಾಡಳಿತ ಎಲ್ಲ ಕ್ರಮ ವಹಿಸಿ ಶಾಲೆಗಳ ಆರಂಭಕ್ಕೆ ಮುಂದಾಗಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಸೋಮವಾರದಿಂದ ಪ್ರೌಢಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳು, ಡಿಡಿಪಿಐ ಹಾಗೂ ಎಸ್‌ಪಿ ಅವರಿಗೆ ಶಾಲೆಗಳಲ್ಲಿ ಶಾಂತಿ ಸಭೆಗಳನ್ನು ಮಾಡಲು ಹಾಗೂ ಪಾಲಕರ ಮತ್ತು ಶಿಕ್ಷಕರ ಸಭೆಗಳನ್ನು ಮಾಡಲು ಸೂಚನೆ ನೀಡಲಾಗಿದೆ. ೧೦ನೇ ತರಗತಿವರೆಗೂ ಶಾಂತಿಯಿಂದ ಶಾಲೆಗಳು ನಡೆಯಲಿವೆ ಎಂದರು.
ಪರಿಸ್ಥಿತಿಯನ್ನು ನೋಡಿಕೊಂಡು ಪಿಯುಸಿ ಹಾಗೂ ಪದವಿ ಕಾಲೇಜುಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು. ಈ ಕುರಿತು ಶಿಕ್ಷಣ ಸಚಿವರಿಗೂ ವರದಿ ಕೊಡಲು ಹೇಳಿದ್ದು, ಅದನ್ನು ಅವಲೋಕಿಸಿ ಅವನ್ನೂ ಸಹ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement