ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ರಾಜೇಶ್ ಅವರಿಗೆ 84 ವರ್ಷ ವಯಸ್ಸಾಗಿದೆ. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಅನುಭವ ಹೊಂದಿರುವ ಅವರು ವಯಸ್ಸಾದ ನಂತರ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಕಿಡ್ನಿ ವೈಫಲ್ಯ ಮತ್ತು ವಯೋಸಹಜ ಕಾಯಿಲೆಗಳಿಂದ ರಾಜೇಶ್ ಅವರು ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಕಸ್ತೂರಬಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜೇಶ್ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ನಾಟಕಗಳ ಮೇಲಿನ ಸೆಳೆತದಿಂದ ಮನೆಯವರಿಗೆ ಗೊತ್ತಾಗದಂತೆ ಸುದರ್ಶನ ನಾಟಕ ಮಂಡಳಿ ಸೇರಿಕೊಂಡಿದ್ದರು. ನಂತರ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನ ರೂಪಿದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ವಿಷ ಸರ್ಪ,‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಖ್ಯಾತಿ ಪಡೆದರು.
1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದರು. 1964ರಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ವೀರ ಸಂಕಲ್ಪದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನಟನಾಗುವಮೊದಲು ರಾಜೇಶ್ ಅವರು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿಕಾರರಾಗಿ ಕೆಲಸ ಆರಂಭಿಸಿದರು. ವೀರ ಸಂಕಲ್ಪ ಸಿನೆಮಾ ಚಿತ್ರೀಕರಣದ ವೇಳೆ ಅವರು 15 ದಿನ ರಜೆ ಹಾಕಿ ಮದ್ರಾಸ್ಗೆ ಹೋಗಿದ್ದರು. ಅಲ್ಲಿಂದ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. ‘
ಶ್ರೀ ರಾಮಾಂಜನೇಯ ಯುದ್ಧ’, ‘ಗಂಗೆ ಗೌರಿ’ ಚಿತ್ರಗಳಲ್ಲೂ ವಿದ್ಯಾಸಾಗರ್ ಅಭಿನಯಿಸಿದರು. ನಂತರ ಕಪ್ಪು ಬಿಳುಪು’, ಎರಡು ಮುಖ, ಭಲೇ ಅದೃಷ್ಟವೋ ಅದೃಷ್ಟ’, ಹೆಣ್ಣು ಹೊನ್ನು ಮಣ್ಣು’, ‘ವಿಷ ಕನ್ಯೆ’, ‘ಕ್ರಾಂತಿ ವೀರ’, ಊರ್ವಶಿ, ದೇವರ ಗುಡಿ’, ಕಾವೇರಿ’, ‘ಬದುಕು ಬಂಗಾರವಾಯಿತು’, ‘ಪುಣ್ಯ ಪುರುಷ’, ‘ಕಾಣಿಕೆ’, ‘ಬೃಂದಾವನ’, ‘ಸುಖ ಸಂಸಾರ’, ‘ದೇವರ ಮಕ್ಕಳು’, ‘ಪೂರ್ಣಿಮಾ’, ‘ನಮ್ಮ ಬದುಕು’, ‘ದೇವರ ದುಡ್ಡು’, ‘ಸೊಸೆ ತಂದ ಸೌಭಾಗ್ಯ’, ‘ಚದುರಿದ ಚಿತ್ರಗಳು’, ‘ವಸಂತ ನಿಲಯ’, ಕಲಿಯುಗ, ‘ದೇವರ ಮನೆ’, ‘ತವರು ಮನೆ’, ‘ತವರು ಮನೆ ಉಡುಗೊರೆ’ ಸೇರಿದಂತೆ ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರಾಜೇಶ್ ಅವರು ನೀಡಿರುವ ಅಪಾರ ಕೊಡುಗೆಗೆ ಕರ್ನಾಟಕ ವಿಶ್ವವಿದ್ಯಾಲಯ 2012ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ