ಕನ್ನಡ ಚಿತ್ರ ರಂಗದ ಹಿರಿಯ ನಟಿ, ರಂಗ ಕಲಾವಿದೆ ಭಾರ್ಗವಿ ನಾರಾಯಣ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗ ಕಲಾವಿದೆ ಭಾರ್ಗವಿ ನಾರಾಯಣ ಸೋಮವಾರ (ಫೆ.14) ರಾತ್ರಿ 7:30ಕ್ಕೆ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು ಹಾಗೂ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಅವರ ಸಾವಿನ ಕುರಿತು ಅವರ ಮೊಮ್ಮಗಳು, ನಟಿ ಸಂಯುಕ್ತಾ ಹೊರನಾಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರ್ಗವಿ ನಾರಾಯಣ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆತ್ಮೀಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಭಾರ್ಗವಿ ಹಾಗೂ ನಾರಾಯಣ ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ವರು ಮಕ್ಕಳಿದ್ದಾರೆ.

ಭಾರ್ಗವಿ ನಾರಾಯಣ ಅವರು 60ರ ದಶಕದಲ್ಲೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ‘ಪ್ರೊ. ಹುಚ್ಚುರಾಯ’ ಚಿತ್ರದಲ್ಲಿನ ಭಾರ್ಗವಿ ಅವರ ನಟನೆಗೆ 1974-75ರ ಸಾಲಿನ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. 2012ರಲ್ಲಿ ಬಿಡುಗಡೆಯಾದ ‘ನಾನು, ಭಾರ್ಗವಿ’ ಎಂಬ ಅವರ ಆತ್ಮಕಥೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ತಮ್ಮ ಪ್ರಕಾಶ ಬೆಳವಾಡಿ ನಿರ್ದೇಶನ ಮಾಡಿದ್ದ ‘ಸ್ಟಂಬಲ್’ (Stumble) ಎನ್ನುವ ಇಂಗ್ಲಿಷ್ ಸಿನಿಮಾದಲ್ಲಿ ಭಾರ್ಗವಿ ನಟಿಸಿದ್ದರು.
ಪ್ರಮುಖ ಸಿನೆಮಾಗಳು, ಸುಬ್ಬಾ ಶಾಸ್ತ್ರೀ, ಪ್ರೊ. ಹುಚ್ಚುರಾಯ, ಪಲ್ಲವಿ, ಜಂಬೂ ಸವಾರಿ, ಕಾಡ ಬೆಳದಿಂಗಳು, ವಂಶವೃಕ್ಷ, ಇದೊಳ್ಳೆ ರಾಮಾಯಣ, ರಾಜಕುಮಾರ ಅಂತಿಮ ಘಟ್ಟ, ಪ್ರೀಮಿಯರ್ ಪದ್ಮಿನಿ, ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, , ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದರು.
ಭಾರ್ಗವಿ ಅವರು 600ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ ನೀಡಿದ್ದಾರೆ.
ಸಿನೆಮಾ, ಕಿರುತೆರೆ ಧಾರವಾಹಿ ಹಾಗೂ ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಭಾರ್ಗವಿ ಅವರದ್ದು ಕಲಾ ಕುಟುಂಬ. ಭಾರ್ಗವಿ ಅವರ ಪತಿ ನಾರಾಯಣ ಅವರನ್ನು ಮೇಕಪ್ ನಾಣಿ ಎಂದೇ ಕರೆಯಲಾಗುತ್ತಿತ್ತು. ಭಾರ್ಗವಿ ಅವರ ಪುತ್ರ ಪ್ರಕಾಶ್ ಬೆಳವಾಡಿ ಅವರದ್ದು ರಂಗಭೂಮಿಯಲ್ಲಿ ದೊಡ್ಡ ಹೆಸರು. ಹಾಗೂ ಹಲವು ಪ್ರಶಸ್ತಿ ಪುರಸ್ಕೃತ ಸಿನೆಮಾ ಹಾಗೂ ಧಾರಾವಾಹಿಗಳನ್ನು ಅವರು ನಿರ್ದೇಶಿಸಿದ್ದಾರೆ. ಪುತ್ರಿ ಸುಧಾ ಬೆಳವಾಡಿ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ಪೋಷಕ ನಟಿ ಹಾಗೂ ಭಾರ್ಗವಿ ಅವರ ಮೊಮ್ಮಗಳು (ಸುಧಾ ಬೆಳವಾಡಿ ಪುತ್ರಿ) ಸಂಯುಕ್ತಾ ಹೊರನಾಡು ಕೂಡ ನಟಿಯಾಗಿ ಹೆಸರು ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement