ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಶಾಸಕ ಜಮೀರ್ ಅಹಮ್ಮದ್

ಬೆಂಗಳೂರು: ಹೆಣ್ಣು ಮಕ್ಕಳು ಬುರ್ಖಾ ಹಾಗೂ ಪರ್ದಾ ಧರಿಸದೇ ಇರುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿಕೆ ನೀಡಿದ್ದ ಶಾಸಕ ಜಮೀರ್‌ ಅಹ್ಮದ್‌ ಈಗ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ನನಗಿಲ್ಲ, ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರು ತಮ್ಮ ಹೇಳಿಕೆಗೆ ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಭಾನುವಾರ, ಜಮೀರ್, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಹಾಗೂ ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಾಬ್ ಪದ್ಧತಿ ಇದೆ ಎಂದು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿ ಸ್ವತಃ ಕೆಪಿಸಿಸ ಅಧ್ಯಕ್‌ ಡಿ.ಕೆ.ಶಿವಕುಮಾರ ಹಾಗೂ ಕರ್ನಾಟಕದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸರ್ಜೇವಾಲಾ ಕೂಡ ಹೇಳಿಕೆ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದರು. ಪರಿಣಾಮ ಮಾಜಿ ಸಚಿವ ಜಮೀರ್ ಅಹಮ್ಮದ್‌ ಅವರು ಟ್ವಿಟ್ಟರ್ ನಲ್ಲಿ 7 ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆಯಾಚಿಸಿದ್ದಾರೆ.
ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ-ಅತ್ಯಾಚಾರಗಳನ್ನು ಕಂಡಾಗ ಭಯ-ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹಿಜಬ್ – ಬುರ್ಖಾ ಧರಿಸುವುದರಿಂದಾದರೂ ಅತ್ಯಾಚಾರವನ್ನು ತಡೆಗಟ್ಟಬಹುದೇನೋ ಎಂಬ ಕಾರಣಕ್ಕೆ ನಾನು ಮಾತನಾಡಿದ್ದೆ. ಈ ರೀತಿ ಹೇಳಿಕೆಯಿಂದ ಯಾರ ಮನಸ್ಸನ್ನಾದರೂ ನೋಯಿಸುವ, ಇಲ್ಲವೇ ಅಗೌರವ ತೋರಿಸುವ ದುರುದ್ದೇಶದಿಂದ ನಾನು ಹೇಳಿಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿದ್ದೇನೆ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಹೇಳಿದ್ದಾರೆ.
ಹಿಜಾಬ್ – ಬುರ್ಖಾ ಧರಿಸುವುದನ್ನು ಧಾರ್ಮಿಕ ಕಟ್ಟಳೆಯನ್ನಾಗಿ ಮಾಡಿದ ನಮ್ಮ ಹಿರಿಯರ ಉದ್ದೇಶವೂ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನಿಂದ ಆ ಮಾತುಗಳು ಬಂದಿದೆಯೇ ಹೊರತಾಗಿ ಬೇರೆ ಯಾವ ದುರುದ್ದೇಶವೂ ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

 

ಪ್ರಮುಖ ಸುದ್ದಿ :-   ಶಿರಸಿ ; ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement