ಕಾರ್ಯಕ್ರಮದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಂದಿ ಸಾವು

ಕುಶಿನಗರ (ಉತ್ತರ ಪ್ರದೇಶ): ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಪೊಲೀಸ್ ಠಾಣೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಳದಿ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಕರು ಜಮಾಯಿಸಿದಾಗ, ಬಾವಿಯ ಮೇಲಿನ ಕಬ್ಬಿಣದ ಗ್ರಿಲ್ ತುಂಡಾಗಿ ಅನೇಕರು ಬಾವಿಯಲ್ಲಿ ಬಿದ್ದಿದ್ದು, ಕನಿಷ್ಠ 13 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಯನ್ನು ತ್ವರಿತಗೊಳಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿರುವ ಮಾಹಿತಿಯ ಪ್ರಕಾರ ನೆಬುವಾ ನೌರಂಗಿಯಾ ಸ್ಕೂಲ್ ಟೋಲಾ ಎಂಬಲ್ಲಿನ ಮನೆಯೊಂದರಲ್ಲಿ ಬುಧವಾರ ಹಳದಿ ಸಮಾರಂಭ ನಡೆಯಿತು. ಈ ಸಮಯದಲ್ಲಿ ಬಾವಿಗೆ ಪೂಜೆಯನ್ನು ಸಹ ಮಾಡಲಾಗುತ್ತದೆ. ಇದಕ್ಕಾಗಿ ಕುಟುಂಬಸ್ಥರು, ನೆರೆಹೊರೆಯವರು, ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾವಿಯ ಬಳಿ ಜಮಾಯಿಸಿದ್ದರು. ಬಾವಿಯ ಕಬ್ಬಿಣದ ಗ್ರಿಲ್ ಮೇಲೆ ಅನೇಕ ಹುಡುಗಿಯರು ಮತ್ತು ಮಹಿಳೆಯರು ನಿಂತಿದ್ದರು. ಅಧಿಕ ತೂಕದ ಕಾರಣ ಕಬ್ಬಿಣದ ಗ್ರಿಲ್‌ ಮುರಿದು, ಜಾಲರಿಯ ಮೇಲಿದ್ದವರೆಲ್ಲ ಆಳವಾದ ಬಾವಿಗೆ ಬಿದ್ದಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಥಳೀಯರು ದೊಡ್ಡ ಏಣಿಯನ್ನು ತಂದು ತಕ್ಷಣ ರಕ್ಷಣಾ ಮತ್ತು ಪರಿಹಾರ ಕಾರ್ಯವನ್ನು ಪ್ರಾರಂಭಿಸಿದರು. ಇದರ ಬೆನ್ನಲ್ಲೇ ಸ್ಥಳೀಯ ಆಡಳಿತ ಹಾಗೂ ಅಗ್ನಿಶಾಮಕ ದಳವೂ ಸ್ಥಳಕ್ಕೆ ಆಗಮಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 13 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಪಘಾತದಲ್ಲಿ 30 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement