
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಮುಂದೊಂದು ದಿನ ಕೆಂಪುಕೋಟೆ ಮೇಲೆ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲೇ ಕಾಂಗ್ರೆಸ್ ಶಾಸಕರು ತಮ್ಮ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಕಾಂಗ್ರೆಸ್ ಸದಸ್ಯರ ಧರಣಿ ನಂತರ ಇಂದು, ಗುರವಾರ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ ೩ ಗಂಟೆಗೆ ಮುಂದೂಡಿದ ನಂತರ ಕಾಂಗ್ರೆಸ್ ಸದಸ್ಯರೆಲ್ಲರಿಗೂ ಇಲ್ಲೇ ಉಳಿಯಿರಿ, ಆಹೋರಾತ್ರಿ ಧರಣಿ ಮಾಡೋಣ ಎಂಬ ಸಂದೇಶವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದು, ರಾತ್ರಿ ಇಲ್ಲೇ ಮಲಗಲು ಎಲ್ಲ ವ್ಯವಸ್ಥೆ ಮಾಡಿಕೊಂಡು ಬನ್ನಿ ಎಂದು ಸೂಚ್ಯವಾಗಿ ಹೇಳಿದ್ದರು.

ನಂತರ ಮಧ್ಯಾಹ್ನದ ಭೋಜನದ ಬಳಿಕ ವಿಧಾನನಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಬಳಿಕ ಸ್ಪೀಕರ್ ನಾಳೆ ಬೆಳಗ್ಗೆ 11 ಗಂಟೆಗೆ ಸದನ ಕಲಾಪ ಮುಂದೂಡಿದರು. ಸದನ ಮುಂದೂಡಿಕೆಯಾದರೂ ಕಾಂಗ್ರೆಸ್ ಶಾಸಕರು ತಮ್ಮ ಧರಣಿ ಮುಂದುವರಿಸಿದ್ದಾರೆ.
ಧರಣಿಗೆ ಕುಳಿತ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಯತ್ನಿಸಿದರು. ಅಹೋರಾತ್ರಿ ಧರಣಿ ಕೈಬಿಡಿ, ನಾಳೆ ಕಲಾಪ ಆರಂಭವಾದ ಬಳಿಕ ಧರಣಿ ಮುಂದುವರಿಸಬಹುದು ಎಂದು ಮನವಿ ಮಾಡಿದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಹೋರಾತ್ರಿ ಪ್ರತಿಭಟನೆ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. .
ಹಾಗಾಗಿ ಕಾಂಗ್ರೆಸ್ ಸದನದಲ್ಲೆ ಅಹೋರಾತ್ರಿ ಧರಣಿ ನಡೆಸುವುದು ನಿಶ್ಚಿತವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಅವರಿಗೆ ಧರಣಿಗೆ ಎಲ್ಲ ವ್ಯವಸ್ಥೆ ಮಾಡಲು ಹಾಗೂ ಹಾಸಿಗೆ ದಿಂಬು ತರಿಸಲು ಸೂಚಿಸಿದ್ದಾರೆ.
ಏನೇ ಆದರೂ, ಈಶ್ವರಪ್ಪನವರ ರಾಜೀನಾಮೆ ಪಡೆಯುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ, ಅವರು ರಾಜೀನಾಮೆ ನೀಡುವ ವರೆಗೂ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದಾರೆ.
ಅಹೋರಾತ್ರಿ ಧರಣಿ ನಮಗೇನೂ ಹೊಸದಲ್ಲ. ಹಿಂದೆ ನಡೆಸಿದ್ದೇವೆ. ಗಣಿ ಹಗರಣ ಸಂದರ್ಭದಲ್ಲೂ ೫ ದಿನ ಸದನದಲ್ಲಿಯೇ ಉಳಿದು ಆಹೋರಾತ್ರಿ ಧರಣಿ ನಡೆಸಿದ್ದೇವೆ ಎಂಬುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ ಹೇಳಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಹಾಗೂ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಶಾಸಕರು ಸದನದಲ್ಲೇ ಅಹೋರಾತ್ರಿ ಧರಣಿ ಮಾಡುತ್ತಿರುವ ಹಿನ್ನೆಲೆ ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಮನವಿ ಮಾಡಿದ್ದು, ವಿಶಾಲಾಕ್ಷಿಯವರು ಅಧಿಕಾರಿಗಳಿಗೆ ಎಲ್ಲ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ. ಧರಣಿನಿರತ ಶಾಸಕರಿಗೆ ಸಸ್ಯಾಹಾರಿ ಊಟ, ಹಾಸಿಗೆ, ಟೀ-ಕಾಫಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ