ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದತ್ತ ಸಾಗುತ್ತಿರುವಂತೆಯೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಬಿಡುಗಡೆ ಮಾಡಿರುವ ವರದಿಯು 621 ರಲ್ಲಿ 129 ಅಂದರೆ 21% ಅಭ್ಯರ್ಥಿಗಳು ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯ ಆಧಾರದ ಮೇಲೆ, 167 (27%) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ವರದಿಯು ಕಂಡುಹಿಡಿದಿದೆ.
ವರದಿಯ ಪ್ರಕಾರ, ಪ್ರಮುಖ ಪಕ್ಷಗಳಲ್ಲಿ, ಕಾಂಗ್ರೆಸ್‌ನಿಂದ 58 ಅಭ್ಯರ್ಥಿಗಳಲ್ಲಿ 31 ಅಥವಾ 53%, ಸಮಾಜವಾದಿ ಪಕ್ಷದಿಂದ 57 ಅಭ್ಯರ್ಥಿಗಳಲ್ಲಿ 30 ಅಥವಾ 53% ಪ್ರತಿಶತ, ಬಿಎಸ್‌ಪಿಯಿಂದ 59 ಅಭ್ಯರ್ಥಿಗಳಲ್ಲಿ 26 ಅಥವಾ 44%, ಬಿಜೆಪಿಯಿಂದ ವಿಶ್ಲೇಷಿಸಲಾದ 57 ಅಭ್ಯರ್ಥಿಗಳಲ್ಲಿ 23 ಅಥವಾ 40% ಮತ್ತು ಆಮ್ ಆದ್ಮಿ ಪಕ್ಷದಿಂದ ವಿಶ್ಲೇಷಿಸಲಾದ 45 ಅಭ್ಯರ್ಥಿಗಳಲ್ಲಿ 11 ಅಥವಾ 24 %ರಷ್ಟು ಜನರು ತಮ್ಮ ವಿರುದ್ಧ ಇರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ.
ಇಬ್ಬರು ಅಭ್ಯರ್ಥಿಗಳು ಅತ್ಯಾಚಾರ ಆರೋಪ, ಐವರು ಕೊಲೆ ಆರೋಪ ಮತ್ತು 11 ಮಂದಿ ‘ಕೊಲೆ ಯತ್ನ’ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
621 ಅಭ್ಯರ್ಥಿಗಳಲ್ಲಿ 231 (37%) ಕೋಟ್ಯಧಿಪತಿ ಅಭ್ಯರ್ಥಿಗಳು ಎಂದು ವರದಿ ತೋರಿಸಿದೆ. ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ 2022 ರ ನಾಲ್ಕನೇ ಹಂತದಲ್ಲಿ ಪ್ರಮುಖ ಪಕ್ಷಗಳ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಆಸ್ತಿಯ ಸರಾಸರಿ 2.46 ಕೋಟಿ ರೂ. ಗಳಾಗಿದೆ. ವಿಶ್ಲೇಷಿಸಿದ 57 ಬಿಜೆಪಿ ಅಭ್ಯರ್ಥಿಗಳ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ ರೂ. 7.57 ಕೋಟಿ, 57 ಎಸ್‌ಪಿ ಅಭ್ಯರ್ಥಿಗಳು 5.65 ಕೋಟಿ ರೂ., 59 ಬಿಎಸ್‌ಪಿ ಅಭ್ಯರ್ಥಿಗಳು 4.71 ಕೋಟಿ ರೂ.ಗಳ ಸರಾಸರಿ ಆಸ್ತಿ ಹೊಂದಿದ್ದಾರೆ, 58 ಕಾಂಗ್ರೆಸ್ ಅಭ್ಯರ್ಥಿಗಳು 3.33 ಕೋಟಿ ರೂ.ಗಳ ಸರಾಸರಿ ಆಸ್ತಿ ಹೊಂದಿದ್ದಾರೆ ಮತ್ತು 45 ಎಎಪಿ ಅಭ್ಯರ್ಥಿಗಳು ಸರಾಸರಿ 2.08 ಕೋಟಿ ರೂ.ಗಳ ಆಸ್ತಿ ಹೊಂದಿದ್ದಾರೆ.
ಲಕ್ನೋದಿಂದ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿ ರಾಜೀವ್ ಬಕ್ಷಿ ಅವರು ₹56.6 ಕೋಟಿ ಮೌಲ್ಯದ ಅತ್ಯಧಿಕ ಆಸ್ತಿ ಘೋಷಿಸಿದ್ದರೆ, ಖಗಾ ಕ್ಷೇತ್ರದ ಆಪ್ ಅಭ್ಯರ್ಥಿ ವಿಜಯ್ ಕುಮಾರ್ ಅವರು ತಮ್ಮ ಸ್ವಯಂ ಪ್ರಮಾಣ ಪತ್ರದಲ್ಲಿ ಶೂನ್ಯ ಆಸ್ತಿ ಘೋಷಿಸಿದ್ದಾರೆ…!
ಫೆಬ್ರವರಿ 23 ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ 59 ಕ್ಷೇತ್ರಗಳಲ್ಲಿ ಇಪ್ಪತ್ತೊಂಬತ್ತು (49%) ಕ್ಷೇತ್ರಗಳು “ರೆಡ್ ಅಲರ್ಟ್” ಕ್ಷೇತ್ರಗಳಾಗಿವೆ. ರೆಡ್ ಅಲರ್ಟ್ ಕ್ಷೇತ್ರಗಳೆಂದರೆ ಮೂರು ಅಥವಾ ಅದಕ್ಕಿಂತ ಹೆಚ್ಚು ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ