ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್ವುಡ್ ಹಿರಿಯ ನಟ ರಾಜೇಶ್ (87) ಶನಿವಾರ ಕೊನೆಯುಸಿರೆಳೆದಿದ್ದಾರೆ. ಶನಿವಾರ ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.
ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ರಾಜೇಶ್ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಸಂಜೆ 6 ಗಂಟೆ ವರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಜೇಶ್ ಅವರ ಪುತ್ರಿ ಆಶಾ ರಾಣಿ ಕೂಡ ಚಿತ್ರರಂಗದಲ್ಲಿ ಯಶಸ್ಸು ಕಂಡವರು. ಆಶಾ ರಾಣಿ ಅವರನ್ನು ನಟ ಅರ್ಜುನ್ ಸರ್ಜಾ 1988ರಲ್ಲಿ ಮದುವೆ ಆಗಿದ್ದಾರೆ.
ರಾಜೇಶ ಅವರು ನಟನೆ ಜೊತೆ ಶಕ್ತಿ ನಾಟಕ ಮಂಡಳಿ ಕಟ್ಟಿದ್ದ ರಂಗಕರ್ಮಿ. ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಅವರ ಮೂಲ ಹೆಸರು ಮುನಿ ಚೌಡಪ್ಪ. ಶ್ರೀನಿ ನಟನೆಯ ಓಲ್ಡ್ ಮಾಂಕ್ ಚಿತ್ರದಲ್ಲಿ ಕೊನೆಯ ಬಾರಿ ರಾಜೇಶ್ ಅವರು ನಟಿಸಿದ್ದರು. ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ರಾಜೇಶ್ ಗುರುತಿಸಿಕೊಂಡಿದ್ದರು. 60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಾಜೇಶ್ ಅವರಿಗೆ 1968ರ ನಮ್ಮ ಊರು ಚಿತ್ರ ಹೆಸರು ತಂದುಕೊಟ್ಟಿತ್ತು. ನಂತರ ರಾಜೇಶ್ ಎಂದು ಹೆಸರು ಬದಲಿಸಿಕೊಂಡಿದ್ದರು. ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ. ಅವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ