ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಂಕಷ್ಟ ಎದುರಾಗಿದೆ. ಜಮೀರ್ ಹಾಗೂ ಜಮೀರ್ ಅಹಮದ್ ಖಾನ್, ಅವರ ಸಹೋದರ ಮತ್ತು ಇತರರ ವಿರುದ್ಧ ವಂಚನೆ, ಅತಿಕ್ರಮಣ ಮತ್ತು ಬೆದರಿಕೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಏಳನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಇಲ್ಲಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಹಿಸ್ತಾ ನಜೀನ್ ಖಾನಮ್ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಜಮೀನು ಖರೀದಿಸಿದ್ದರು. ಆಗಸ್ಟ್ 4 ರಂದು ಕಾರ್ಮಿಕರಿಗೆ ಶೆಡ್ ನಿರ್ಮಿಸಲು ಹೋದಾಗ, ಖಾನ್ ಅವರ ಸಹೋದರ ಜಮೀಲ್ ಅಹ್ಮದ್ ಖಾನ್ ಮತ್ತು ಇತರರು ಅತಿಕ್ರಮಣ ಮಾಡಿದರು ಮತ್ತು ಅಲ್ಲಿ ಏನನ್ನೂ ನಿರ್ಮಿಸದಂತೆ ಬೆದರಿಕೆ ಹಾಕಿದರು ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ.
ಜಮೀರ್ ಕುಟುಂಬದ ವಿರುದ್ಧ ಆರೋಪಿಸಿ ಸೈಟ್ ಮಾಲಕರು ಕಳೆದ ವರ್ಷ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಜತೆಗೆ ಕಬಳಿಕೆ ಮಾಡಿರುವ ಸೈಟ್ ಸಂಬಂಧ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿತ್ತು. ಕೋರ್ಟ್ ನಿಂದ ತಡೆಯಾಜ್ಞೆ ತಂದರೂ, ಸೈಟ್ ಬಿಟ್ಟು ಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ.
2015 ರಲ್ಲಿ ಶಾಹೀತಾ ನಾಸೀನ್, ತಸೀಮಾ ಫಾತೀಮಾ ಅವರು ಜಮೀರ್ ಕುಟುಂಬಸ್ಥರಿಂದ ಚೊಕ್ಕನಹಳ್ಳಿ ಬಡಾವಣೆಯಲ್ಲಿ ಸೈಟ್ ಖರೀದಿಸಿದ್ದಾರೆಂದು ಹೇಳಲಾಗಿದೆ. ಶಾಸಕ ಜಮೀರ್ ಸಹೋದರ ಹಾಗೂ ಕುಟುಂಬಸ್ಥರೇ ಅದನ್ನು ಮಾರಾಟ ಮಾಡಿದ್ದರುಎಂದು ಶಾಹೀತಾ ನಾಸೀನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೆಸಿ ನಗರ ನಿವಾಸಿಗಳಾಗಿದ್ದ ಶಾಹೀತಾ ನಾಸೀನ್ ಸೈಟ್ಗಳ ಕಡೆ ಗಮನ ಹರಿಸಿರಲಿಲ್ಲ. ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್ ಕುಟುಂಬದಿಂದಲೇ ಸೈಟ್ಗಳ ಕಬಳಿಕೆ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಕಬಳಿಕೆ ಪ್ರಶ್ನಿಸಿದ್ದ ಶಾಹೀತಾ ನಾಸೀನ್ ಕುಟುಂಬಕ್ಕೆ ಜೀವಬೆದರಿಕೆ ಹಾಕಲಾಗಿದೆ ಎಂದೂ ಆರೋಪಿಸಲಾಗಿದೆ.
ಜಮೀರ್ ಅಹಮದ್ ಖಾನ್ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ