ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಈಶ್ವರಪ್ಪನವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ನವದೆಹಲಿ: ಕೇಸರಿ ಧ್ವಜದ ಕುರಿತು ಸಚಿವ ಕೆ. ಎಸ್. ಈಶ್ವರಪ್ಪ ಅವರ ಹೇಳಿಕೆಯ ಕುರಿತು ಕರ್ನಾಟಕದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ಬಗ್ಗೆ ಈಶ್ವರಪ್ಪ ಅವರಿಗೆ ಛೀಮಾರಿ ಹಾಕಿದ್ದೇನೆ ಎಂದು ಹೇಳಿದ್ದಾರೆ.
ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಡ್ಡಾ ಅವರು ಈ ಬಗ್ಗೆ ಮಾತನಾಡಿದ್ದು, ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕರ್ನಾಟಕ ಸಚಿವ ಈಶ್ವರಪ್ಪನವರಿಗೆ ನಾನು ಕರೆ ಮಾಡಿದ್ದೆ ಹಾಗೂ ಈ ಬಗ್ಗೆ ಕಟುವಾಗಿ ಛೀಮಾರಿ ಹಾಕಿದ್ದೇನೆ ಎಂದು ಜೆ.ಪಿ.ನಡ್ಡಾ ಹೇಳಿದ್ದಾರೆ.

ಇದು ಸಾಧ್ಯವಿಲ್ಲ… ನಾವು (ಬಿಜೆಪಿ) ರಾಷ್ಟ್ರೀಯವಾದಿಗಳು, ನಾವು ಸಂವಿಧಾನ ಮತ್ತು ಕಾನೂನನ್ನು ರಕ್ಷಿಸುತ್ತೇವೆ… ಸಚಿವರ ಬೇಜವಾಬ್ದಾರಿ ಹೇಳಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ. ” ಎಂದು ನಡ್ಡಾ ಹೇಳಿದರು.

ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು ಕೇಸರಿ ಧ್ವಜವು ಭವಿಷ್ಯದಲ್ಲಿ ರಾಷ್ಟ್ರಧ್ವಜವಾಗಬಹುದು ಎಂದು ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದ್ದು, ರಾಷ್ಟ್ರಧ್ವಜದ ಬಗ್ಗೆ ಅವರು ಮಾಡಿದ ಹೇಳಿಕೆಗಾಗಿ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕು ಎಂದು ವಿಧಾನಸಭೆಯಲ್ಲಿಯೂ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದೆ.
ಕರ್ನಾಟಕದ ಹಿಜಾಬ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಿಜಾಬ್ ವಿವಾದಕ್ಕೆ ಉತ್ತೇಜನ ನೀಡುತ್ತಿದೆ ಮತ್ತು ಆ ಮೂಲಕ ರಾಜಕೀಯ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳು ಹಿಜಾಬ್ ವಿಷಯವನ್ನು ಮತ್ತಷ್ಟು ದೊಡ್ಡದು ಮಾಡಲು ಪ್ರಯತ್ನಿಸುತ್ತಿವೆ. ನಾವು [ಬಿಜೆಪಿ] ಅಭಿವೃದ್ಧಿ ವಿಷಯಗಳ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ನಡ್ಡಾ, ಸಿಖ್ ಬಹುಸಂಖ್ಯಾತ ರಾಜ್ಯದಲ್ಲಿ ಪಕ್ಷವು ತನ್ನ ನೆಲೆಯನ್ನು ವಿಸ್ತರಿಸಲು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ.ಪಂಜಾಬ್ ಚುನಾವಣಾ ಫಲಿತಾಂಶಗಳು ಅತಂತ್ರ ವಿಧಾನಸಭೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದ ಅವರು ಆದಾಗ್ಯೂ, ಈ ಹಂತದಲ್ಲಿ ಅವರು ಮಾಜಿ ಮಿತ್ರಪಕ್ಷ ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ತಳ್ಳಿಹಾಕಿದರು.
ಆಮ್‌ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಯಿಸಿದ ನಡ್ಡಾ,
ತಮಗೆ ಭಯೋತ್ಪಾದಕರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಕೇಜ್ರಿವಾಲ್ ಯಾಕೆ ಹೇಳುವುದಿಲ್ಲ? ಕೇಜ್ರಿವಾಲ್ ಅವರು ಹೇಳುವ ಮತ್ತು ಮಾಡುವುದರ ನಡುವೆ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದು ನಡ್ಡಾ ಟೀಕಿಸಿದರು.
ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡದ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ರಾಜ್ಯಗಳಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಅವರು ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಯ್ತು ಬರೋಬ್ಬರಿ 9900 ಕೋಟಿ ರೂ....! ಮುಂದಾಗಿದ್ದೇನು..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement