ಹೈಕೋರ್ಟಿನಲ್ಲಿ ಹಿಜಾಬ್‌ ಪ್ರಕರಣ: ಹಿಜಾಬ್ ಕಡ್ಡಾಯವಲ್ಲ, ಆಯ್ಕೆಯಷ್ಟೇ: ಯಾವುದೇ ಉಡುಪು ಧರಿಸಲು ಮಹಿಳೆಯನ್ನು ಒತ್ತಾಯಿಸಲಾಗದು-ಹೈಕೋರ್ಟ್‌ ಮುಂದೆ ಸರ್ಕಾರದ ವಾದ

ಬೆಂಗಳೂರು: ಹಿಜಾಬ್ ಧರಿಸುವುದನ್ನು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸುವುದು ಮುಸ್ಲಿಂ ಮಹಿಳೆಯರನ್ನು ನಿರ್ದಿಷ್ಟ ಉಡುಪನ್ನು ಧರಿಸಲು ಒತ್ತಾಯಿಸಿದಂತಾಗುತ್ತದೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಎಂಟನೇ ದಿನವಾದ ಮಂಗಳವಾರ ಸಹ ಮುಂದುವರೆಸಿತು.
“ಒಂದೊಮ್ಮೆ ನ್ಯಾಯಾಲಯದ ಆದೇಶದ ಮೂಲಕ ಹಿಜಾಬ್‌ ಧರಿಸುವುದಕ್ಕೆ ಧಾರ್ಮಿಕ ಅನುಮೋದನೆ ನೀಡಿದರೆ ಮುಸ್ಲಿಮ್‌ ಮಹಿಳೆ ಆ ನಿರ್ದಿಷ್ಟ ಉಡುಪನ್ನು ಧರಿಸುವುದು ಕಡ್ಡಾಯವಾಗುತ್ತದೆ. ಇಷ್ಟವಿಲ್ಲದವರೂ ಹಿಜಾಬ್‌ ಹಾಕಬೇಕಾಗುತ್ತದೆ” ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹೇಳಿದರು.
ಇದಕ್ಕೆ ಪೀಠವು “ಹಾಗೆಂದರೆ, ಹಿಜಾಬ್‌, ಅಗತ್ಯ ಧಾರ್ಮಿಕ ಆಚರಣೆ ಎಂದು ನ್ಯಾಯಾಲಯ ಹೇಳಿದರೆ ಅದನ್ನು ಧರಿಸದ ಮುಸ್ಲಿಮ್ ಮಹಿಳೆಯರ ಘನತೆ ಕುಗ್ಗಿಸಿದ್ದಕ್ಕೆ ಸಮನಾಗುತ್ತದೆ ಎಂದು ನೀವು ಹೇಳುತ್ತಿದ್ದೀರಾ?” ಎಂದು ಮರು ಪ್ರಶ್ನೆ ಹಾಕಿತು.
ಅದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ನಮಗೆ ಬೇಕಾದುದನ್ನು ಧರಿಸುವ ಆಯ್ಕೆ ಮತ್ತು ನಮಗೆ ಬೇಡವಾದದ್ದನ್ನು ಧರಿಸದಿರುವ ಆಯ್ಕೆಗೆ ಧಕ್ಕೆ ಒದಗುತ್ತದೆ. ಧಾರ್ಮಿಕ ನಂಬಿಕೆಯುಳ್ಳ ಪ್ರತಿಯೊಬ್ಬ ಮಹಿಳೆಗೆ ಅಂತಹ ಆಯ್ಕೆ ಇದೆ. ನ್ಯಾಯಾಂಗದ ಆದೇಶದ ಮೂಲಕ ಧಾರ್ಮಿಕ ಅನುಮೋದನೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಹಿಜಾಬ್‌ ಧರಿಸುವುದು ಇಸ್ಲಾಮ್‌ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ  ಎಂದು ವಾದಿಸಿದ ಅಡ್ವೊಕೇಟ್‌ ಜನರಲ್‌ “ಯಾವುದು ಅನಿವಾರ್ಯವಲ್ಲವೋ ಅದು ಕಡ್ಡಾಯವಲ್ಲ. ಯಾವುದು ಕಡ್ಡಾಯವಲ್ಲವೋ ಅದು ಅಗತ್ಯವಲ್ಲ. ಹೀಗಾಗಿ, ಇದು ಅಗತ್ಯ ಧಾರ್ಮಿಕ ಆಚರಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
“ದೇಶದಲ್ಲಿ ಹಿಜಾಬ್‌ಗೆ ನಿಷೇಧವಿಲ್ಲ. 19(1)(ಎ) ವಿಧಿ ಅಡಿಯಲ್ಲಿ ಹಿಜಾಬ್ ಧರಿಸುವ ಹಕ್ಕು 19(2) ಅಡಿಯಲ್ಲಿ ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ನಮ್ಮ ವಿಚಾರದಲ್ಲಿ ನಿಯಮ 11 (ಕರ್ನಾಟಕ ಶೈಕ್ಷಣಿಕ ನಿಯಮಾವಳಿ) ಸಾಂಸ್ಥಿಕ ಶಿಸ್ತಿಗೆ ಸಮಂಜಸವಾದ ನಿರ್ಬಂಧವನ್ನು ಹೊಂದಿದೆ. ಮುಸ್ಲಿಮ್‌ ವಿದ್ಯಾರ್ಥಿನಿಯರು ಕ್ಯಾಂಪಸ್‌ನಲ್ಲಿ ಹಿಜಾಬ್‌ ಧರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ತರಗತಿಯಲ್ಲಿ ಮತ್ತು ತರಗತಿಯ ಸಮಯದಲ್ಲಿ ಮಾತ್ರ ಹಿಜಾಬ್‌ ಧರಿಸುವಂತಿಲ್ಲ. ಅವರು ಯಾವುದೇ ಧರ್ಮದವರಾಗಿದ್ದರೂ ಅದು ಎಲ್ಲರಿಗೂ ಅನ್ವಯಿಸುತ್ತದೆ” ಎಂದರು.
ಶಬರಿಮಲೆ ಮತ್ತು ಇತರೆ ಪ್ರಕರಣಗಳ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸಾಂವಿಧಾನಿಕ ನೈತಿಕತೆಯ ಭಾಗವಾಗಿ ಶಾಲೆಗಳಲ್ಲಿ ಹಿಜಾಬ್‌ ಅನ್ನು ಒಪ್ಪಿಕೊಳ್ಳಬಹುದೇ ಎಂದು ಪೀಠಕ್ಕೆ ಪ್ರಶ್ನೆ ಹಾಕಿದರು ಎಂದು ವರದಿ ತಿಳಿಸಿದೆ.
ವಾದ ಪೂರ್ಣಗೊಳಿಸುವ ಸಂದರ್ಭದಲ್ಲಿ ನಾವದಗಿ ಅವರು ಶಬರಿಮಲೆ ಮತ್ತು ಇತರೆ ಪ್ರಕರಣಗಳ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸಾಂವಿಧಾನಿಕ ನೈತಿಕತೆಯ ಭಾಗವಾಗಿ ಶಾಲೆಗಳಲ್ಲಿ ಹಿಜಾಬ್‌ ಅನ್ನು ಒಪ್ಪಿಕೊಳ್ಳಬಹುದೇ ಎಂದು ಪ್ರಶ್ನೆ ಹಾಕಿದರು.
ಶಬರಿಮಲೆ ತೀರ್ಪಿಗೆ ಸಂಬಂಧಿಸಿದಂತೆ ತೀರ್ಪು ಮರುಪರಿಶೀಲನಾ ಅರ್ಜಿ ಇತ್ಯರ್ಥವಾಗಿದೆಯೇ ಎಂದು ಪೀಠವು ನಾವದಗಿ ಅವರನ್ನು ಪ್ರಶ್ನಿಸಿತು. ಆಗ ಅವರು “ಏಳು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ, ಇಂದಿನವರೆಗೆ ಶಬರಿಮಲೆ ಪ್ರಕರಣದ ತೀರ್ಪು ಕಾನೂನಾಗಿದೆ” ಎಂದರು.
ಆಗ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಅದು ಸರಿ. ಆದರೆ, ಶಬರಿಮಲೆ ಪ್ರಕರಣದಲ್ಲಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿರುವ ಪ್ರಶ್ನೆಗಳಿಗೆ ನಮ್ಮ ಮುಂದಿರುವ ಪ್ರಕರಣದ ಕೆಲವು ವಿಚಾರಗಳು ಸಂಧಿಸುತ್ತವೆ” ಎಂದರು.
ಕಾಲೇಜೊಂದರ ಶಿಕ್ಷಕರ ಪರವಾಗಿ ವಾದಿಸಿದ ಹಿರಿಯ ವಕೀಲ ಆರ್‌ ವೆಂಕಟರಮಣಿ ಅವರು “ಶಿಕ್ಷಕನಾಗಿ ನಾನು ತರಗತಿಯಲ್ಲಿ ಸ್ವತಂತ್ರ ಮನಸ್ಸು ಇರಲು ಬಯಸುತ್ತೇನೆ. ಶಿಸ್ತನ್ನು ತರಲು ಸರ್ಕಾರ ಮತ್ತು ಶಾಲೆಯ ಕಡೆಯಿಂದ ಯಾವುದೇ ಕ್ರಮ -ತಟಸ್ಥತೆ ಹೊಂದಿರುವವರೆಗೆ – ಅಗತ್ಯ. ಸಮುದಾಯಗಳಲ್ಲಿರುವ ವಿವಿಧ ಸ್ಥಳಗಳಿಗೆ ಸಾರ್ವಜನಿಕ ಸುವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಅಗತ್ಯ ಧಾರ್ಮಿಕ ಆಚರಣೆ ಮತ್ತು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ ವಾದದ ಕುರಿತು ವೆಂಕಟರಮಣಿ ಅವರು “ಧರ್ಮದಲ್ಲಿ ಏನೇನು ಸೇರಿದೆ, ಯಾವುದು ಅಗತ್ಯ ಮತ್ತು ಯಾವುದು ಅಗತ್ಯವಲ್ಲ ಎಂಬ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದು. ಆದರೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದಲ್ಲಿ ಏರುಪೇರಾದಾಗ ಸರ್ಕಾರ ಮಧ್ಯಪ್ರವೇಶಿಸಬಹುದು” ಎಂದರು.
ಸಂವಿಧಾನದ 19(1)(ಎ) ವಿಧಿಯಡಿ ಅರ್ಜಿದಾರರು ಎತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು “ವಾಕ್‌ ಸ್ವಾತಂತ್ರ್ಯ ಎಂದರೆ ನಾವು ಕಗ್ಗತ್ತಲ ಕಾಲಕ್ಕೆ ಮರಳಬೇಕು ಎಂದಲ್ಲ. ನಾವು ಮುನ್ನಡೆಯಬೇಕೆ ವಿನಾ ಕಗ್ಗತ್ತಲ ಕಾಲಕ್ಕೆ ಮರಳುವುದಲ್ಲ ಎಂದು ಪ್ರತಿಪಾದಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ ಅವರು ಹಿಂದೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರಲಿಲ್ಲ. ಸಾಂದರ್ಭಿಕವಾಗಿ ಹುಡುಗಿಯರ ಪೋಷಕರು ಈ ಬಗ್ಗೆ ಕೇಳಿದ್ದಾರೆ. ಹೆಣ್ಣು ಮಕ್ಕಳು ಗಾಯನ, ನೃತ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ನೋಡಿಕೊಳ್ಳುವಂತೆ ಪಾಲಕರು ಶಿಕ್ಷಕರಿಗೆ ತಿಳಿಸಿದ್ದರು ಎಂದರು. “ಮುಸ್ಲಿಮ್‌ ಹೆಣ್ಣು ಮಕ್ಕಳು ಹಾಡಬಾರದು ಎಂಬುದು ಅವರ ಅರ್ಥವೇ ಎಂಬುದು ನನಗೆ ಗೊತ್ತಿಲ್ಲ. ರಾಷ್ಟ್ರಗೀತೆ ಹಾಡಿದರೆ ಅವರು ಅದನ್ನು ಹಾಡಬಾರದೇ? ಇದು ಇಸ್ಲಾಮ್‌ಗೆ ವಿರುದ್ಧವೇ? ದೇಶ, ಭಾರತ ಮಾತೆ ಕುರಿತ ಭಕ್ತಿ ಗೀತೆಯ ಬಗ್ಗೆ ಹೇಳಿಕೊಟ್ಟರೆ ಅವರು ಹಾಡಬಾರದೇ ಎಂದು ಕೇಳಿದರು.
ನಿಮ್ಮ ಧರ್ಮ ಆಚರಣೆಗಾಗಿ ನೀವು ಮತ್ತೊಬ್ಬರ ಶಾಂತಿಗೆ ಭಂಗ ಉಂಟು ಮಾಡಿದರೆ  ಆಗ ಎಲ್ಲೆ ಎಲ್ಲಿರುತ್ತದೆ?” ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಹಿಜಾಬ್ ವಿವಾದ ಪ್ರಕರಣವನ್ನು ಇದೇ ವಾರದಲ್ಲಿ ಇತ್ಯರ್ಥಪಡಿಸಲು ಬಯಸಿರುವುದಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ತಿಳಿಸಿದ್ದಾರೆ. ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದಕ್ಕೆ ಕಾಲೇಜು ನಿರಾಕರಿಸಿರುವುದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಮುಂದುವರಿಸಿದ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement