ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

ಮುಂಬೈ: ಮುಂಬೈ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದ ನಂತರ ಇಂದು, ಬುಧವಾರ ಬಂಧಿಸಿದೆ.
ಇತ್ತೀಚೆಗಷ್ಟೇ ಇಡಿ ಹಲವು ದಾಳಿಗಳನ್ನು ನಡೆಸಿದ್ದು, ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ವಶಕ್ಕೆ ಪಡೆದಿತ್ತು. ಮೂಲಗಳ ಪ್ರಕಾರ, ನವಾಬ್ ಮಲಿಕ್ ಖರೀದಿಸಿದ ಆಸ್ತಿಗೆ ಸಂಬಂಧಿಸಿದ ಕೆಲವು ಪುರಾವೆಗಳು ನಡೆಯುತ್ತಿರುವ ತನಿಖೆಯ ಸಮಯದಲ್ಲಿ ಹೊರಬಂದಿವೆ.
ಮುಂಬೈನ ಇಡಿ ಕಚೇರಿಯಿಂದ ಹೊರ ಬರುವಾಗ ತಮ್ಮ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, “ಗೆಲ್ಲುತ್ತೇನೆ, ತಲೆಬಾಗುವುದಿಲ್ಲ” ಎಂದು ಹೇಳಿದ್ದಾರೆ.
62 ವರ್ಷದ ಸಚಿವರನ್ನು ಇಂದು ಬೆಳಗ್ಗೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಕರೆದೊಯ್ಯಲಾಯಿತು.
ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಇಂದು, ಬುಧವಾರ ಬೆಳಗ್ಗೆ 6 ಗಂಟೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕನ ಮನೆಗೆ ತಲುಪಿದರು, ಅಲ್ಲಿ ಅವರನ್ನು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ ಇಡಿ ಕಚೇರಿಗೆ ಕರೆತಂದು ಮತ್ತೆ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ದಾವೂದ್ ಇಬ್ರಾಹಿಂನ ದಿವಂಗತ ಸಹೋದರಿ ಹಸೀನಾ ಪಾರ್ಕರ್, ಸಹೋದರ ಇಕ್ಬಾಲ್ ಕಸ್ಕರ್ ಮತ್ತು ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್‌ಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಸುಮಾರು 10 ಸ್ಥಳಗಳಲ್ಲಿ ಇಡಿ ಕೆಲ ದಿನಗಳ ಹಿಂದೆ ದಾಳಿ ನಡೆಸಿತ್ತು.ಭೂಗತ ಜಗತ್ತಿನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯು ಹೊಸ ಪ್ರಕರಣವನ್ನು ದಾಖಲಿಸಿಕೊಂಡು ಮುಂಬೈನಲ್ಲಿ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಮಲಿಕ್ ಅವರನ್ನು ಬುಧವಾರ ಬಂಧಿಸಲಾಯಿತು.
ಮಹಾರಾಷ್ಟ್ರ ಕಾಂಗ್ರೆಸ್ ಮತ್ತು ಎನ್‌ಸಿಪಿ ಮುಖಂಡರು ಸಚಿವ ಮಲಿಕ್ ಅವರನ್ನು ಇಡಿ ಬಂಧಿಸಿರುವುದು “ಸೇಡಿನ” ಕ್ರಮವಾಗಿದೆ ಎಂದು ಹೇಳಿದ್ದಾರೆ.
ಮಲಿಕ್ ಬಂಧನ ಕೇಂದ್ರದ ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣ ಎಂದು ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
ಮಲಿಕ್ ಅವರನ್ನು ವಿಚಾರಣೆ ನಡೆಸುತ್ತಿರುವಾಗ, ದಕ್ಷಿಣ ಮುಂಬೈನ ಇಡಿ ಕಚೇರಿಯ ಸಮೀಪದಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಬಳಿ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾರ್ಯಕರ್ತರು ಇಡಿ ಕಚೇರಿಯತ್ತ ಸಾಗುತ್ತಿರುವುದನ್ನು ಕಂಡ ಪೊಲೀಸರು ಪಕ್ಷದ ಕಚೇರಿ ಬಳಿ ಅವರನ್ನು ತಡೆದರು. ನಂತರ ಅವರು ಧರಣಿ ಸತ್ಯಾಗ್ರಹ ನಡೆಸಿದರು.
ಅನಿಲ್ ದೇಶಮುಖ್ ನಂತರ ಇಡಿಯಿಂದ ಬಂಧಿಸಲ್ಪಟ್ಟ ಮಹಾರಾಷ್ಟ್ರದ ಎರಡನೇ ಸಚಿವ ಮತ್ತು ಎರಡನೇ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಎಂಬುದು ಗಮನಾರ್ಹ.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement