10, 12ನೇ ತರಗತಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸದಿರಲು ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ವಿವಿಧ ಶಿಕ್ಷಣ ಮಂಡಳಿಗಳು ನಡೆಸುವ ಪರೀಕ್ಷೆಗಳನ್ನು ಭೌತಿಕವಾಗಿ/ಆಫ್‌ಲೈನ್‌ ವಿಧಾನದಲ್ಲಿ ನಡೆಸದಂತೆ ಕೋರಿ ಹದಿನೈದು ರಾಜ್ಯಗಳ ಶಾಲಾ ವಿದ್ಯಾರ್ಥಿಗಳು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ಅಧಿಕಾರಿಗಳು ಪರೀಕ್ಷೆಯ ನಿಯಮಗಳು ಮತ್ತು ದಿನಾಂಕಗಳನ್ನು ಇನ್ನೂ ನಿರ್ಧರಿಸದ ಕಾರಣ ಅರ್ಜಿಯು ಅಕಾಲಿಕವಾಗಿದ್ದು ತಪ್ಪು ಸಲಹೆಯಿಂದ ಕೂಡಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ತಿಳಿಸಿತು. ಮುಂದೆ ಇಂತಹ ಅರ್ಜಿ ಸಲ್ಲಿಸಿದರೆ ಅರ್ಜಿದಾರರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯನ್ನೂ ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ನೀಡಿತು.
ಈ ಮನವಿಯು ಅಸಮರ್ಪಕ ಮತ್ತು ಅಕಾಲಿಕವಾಗಿದೆ. ಅಧಿಕಾರಿಗಳು ಇನ್ನೂ ನಿಯಮಗಳು ಮತ್ತು ದಿನಾಂಕ ನಿರ್ಧರಿಸಿಲ್ಲ. ನಿರ್ಧಾರವು ನಿಯಮಗಳಿಗೆ ಅನುಗುಣವಾಗಿಲ್ಲದಿದ್ದರೆ ಅದನ್ನು ಪ್ರಶ್ನಿಸಬಹುದು ಎಂದು ನ್ಯಾಯಾಲಯ ತಿಳಿಸಿತು.
ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಒಡಿಶಾ ವಿದ್ಯಾರ್ಥಿ ಒಕ್ಕೂಟದ ಮೂಲಕ ಮನವಿ ಸಲ್ಲಿಸಲಾಗಿತ್ತು.

ಸಿಬಿಎಸ್‌ಇಯು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಲಿದ್ದು ಐಸಿಎಸ್‌ಇ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ಪರೀಕ್ಷಾ ವೇಳಾಪಟ್ಟಿಯ ಕುರಿತಂತೆ ಇನ್ನೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸಂಬಂಧಿಸಿದಂತೆ ಕೆಲವರು ವೇಳಾಪಟ್ಟಿ ಪ್ರಕಟಿಸಿದ್ದಾರೆ, ಇನ್ನೂ ಕೆಲವರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಓದಿರಿ :-   ಪೆಟ್ರೋಲ್ ಲೀಟರ್​ಗೆ 9.5 ರೂ.ಗಳು, ಡೀಸೆಲ್ 7 ರೂ.ಗಳಷ್ಟು ಇಳಿಕೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ