ಉಕ್ರೇನಿನ ಪಶ್ಚಿಮ ಭಾಗದ ನೆರೆಯ ದೇಶಗಳಿಂದ ಭಾರತೀಯರನ್ನು ಕರೆತರಲು ಪ್ರಯತ್ನ: ಹೊಸ ಮಾರ್ಗ ಕಂಡುಕೊಂಡ ಭಾರತ

ನವದೆಹಲಿ: ರಷ್ಯಾ ಅತಿಕ್ರಮಣದಿಂದ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತದ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಪಶ್ಚಿಮ ಗಡಿ ಮೂಲಕ ಅದರ ನೆರೆಯ ದೇಶಗಳಿಗೆ ಕರೆತಂದು, ಅಲ್ಲಿಂದ ವಿಮಾನಗಳಲ್ಲಿ ಭಾರತಕ್ಕೆ ಕರೆತರಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ.
ಯುದ್ಧದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ವಿಮಾನಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದರ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಸೇರಿದಂತೆ ಎಲ್ಲ ವಿಮಾನಯಾನ ಸಂಸ್ಥೆಗಳೂ 1 ರಿಂದ 1.5 ಲಕ್ಷ ರೂ.ವರೆಗೆ ಟಿಕೆಟ್ ದರ ವಿಧಿಸುತ್ತಿವೆ. ನಾವು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬದವರು. ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಕಡಿಮೆ ಮಾಡಿಸಿ ಎಂದು ಕೆಲವರು ಕೇಂದ್ರ ಸರ್ಕಾರವನ್ನು ಕೋರಿದ್ದರು. ಉಕ್ರೇನ್‌ನಲ್ಲಿರುವ ತಮಿಳುನಾಡಿನ ವಿದ್ಯಾರ್ಥಿಗಳ ಸಂಪೂರ್ಣ ಪ್ರಯಾಣ ವೆಚ್ಚವನ್ನು ತಮಿಳುನಾಡು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಕಟಿಸಿದ್ದರು.
ರಷ್ಯಾ ದಿಢೀರ್‌ ಆಗಿ ಯುದ್ಧ ಘೋಷಿಸಿದ ನಂತರ ಉಕ್ರೇನ್ ತನ್ನ ವಾಯು ಪ್ರದೇಶವನ್ನು ಮುಚ್ಚಿತ್ತು. ಯಾವುದೇ ನಾಗರಿಕ ವಿಮಾನಗಳು ಹಾರಾಟ ನಡೆಸದಂತೆ ಅದು ಸೂಚನೆ ನೀಡಿತ್ತು. ಹೀಗಾಗಿ ಉಕ್ರೇನ್‌ ರಾಜಧಾನಿ ಕೀವ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಹಾಗೆಯೇ ದೆಹಲಿಗೆ ವಾಪಸ್‌ ಬಂದಿತ್ತು.
ಉಕ್ರೇನ್‌ನಲ್ಲಿ ಸುಮಾರು 16 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ರಷ್ಯಾವು ಭೂ, ವಾಯು ಹಾಗೂ ಜಲ ಮಾರ್ಗಗಳಿಂದ ಉಕ್ರೇನ್‌ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಹೀಗಾಗಿ ಭಾರತೀಯರನ್ನು ಕರೆತರಲು ಭಾರತ ಈಗ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ. ಕೀವ್ ಮೂಲಕ ರಸ್ತೆ ಮಾರ್ಗದಲ್ಲಿ ಒಂಬತ್ತು ಗಂಟೆಯಲ್ಲಿ ಪೊಲೆಂಡ್‌ ಹಾಗೂ 12 ಗಂಟೆಗಳಲ್ಲಿ ರೊಮೇನಿಯಾ ತಲುಪಬಹುದಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು, ಉಕ್ರೇನ್ ಗಡಿಯಲ್ಲಿನ ದೇಶಗಳಾದ ಹಂಗೆರಿ, ರೊಮೇನಿಯಾ ಮತ್ತು ಪೊಲೆಂಡ್‌ಗಳಿಗೆ ತಂಡಗಳನ್ನು ರವಾನಿಸಲು ನಿರ್ಧರಿಸಿದೆ. ಅಧಿಕಾರಿಗಳು ಭೂ ಮಾರ್ಗದ ಮೂಲಕ ಉಕ್ರೇನ್ ಒಳಗೆ ತೆರಳಿ ಭಾರತೀಯರನ್ನು ಕರೆತರಲಿದ್ದಾರೆ. ರಷ್ಯಾ ಪ್ರಸ್ತುತ ಪೂರ್ವ ಭಾಗದಿಂದ ದಾಳಿ ನಡೆಸುತ್ತಿದೆ. ಹೀಗಾಗಿ ಪಶ್ಚಿಮ ಭಾಗ ಸುರಕ್ಷಿತವಾಗಿದ್ದು, ಅಲ್ಲಿಂದ ಭಾರತೀಯರನ್ನು ಕರೆತರಲು ಪ್ರಯತ್ನಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement