ನಾಳೆಯಿಂದ ಐದು ದಿನಗಳ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭ

posted in: ರಾಜ್ಯ | 0

ಬೆಂಗಳೂರು: ಕೋವಿಡ್ ೩ನೇ ಅಲೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅರ್ಧಕ್ಕೆ ನಿಂತಿದ್ದ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ನಾಳೆ, ಭಾನುವಾರದಿಂದ ಮತ್ತೆ ಆರಂಭವಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಭಾನುವಾರದ ರಾಮನಗರದಿಂದ ೫ ದಿನಗಳ ಪಾದಯಾತ್ರೆ ಆರಂಭವಾಗಲಿದ್ದು, ಮಾರ್ಚ್ ೩ ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಕಳೆದ ತಿಂಗಳು ಮೇಕೆದಾಟು ಪಾದಯಾತ್ರೆ ಆರಂಭವಾಗಿ ರಾಮನಗರ ತಲುಪಿತ್ತು. ಅಷ್ಟರಲ್ಲಿ ಮೂರನೇ ಅಲೆ ಉಲ್ಬಣದ ಕಾರಣ ಕೋರ್ಟ್‌ ತರಾಟೆ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ನಾಳೆ, ಭಾನುವಾರ ಮೊದಲ ದಿನ ರಾಮನಗರದಿಂದ ಬಿಡದಿ ವರೆಗೂ ಕಾಂಗ್ರೆಸ್ ನಾಯಕರ ಪಾದಯಾತ್ರೆ ನಡೆಯಲಿದ್ದು, ಬಿಡದಿಯಲ್ಲಿ ನಾಯಕರು ವಾಸ್ತವ್ಯ ಮಾಡಲಿದ್ದಾರೆ.
ಫೆ. ೨೮ ರಂದು ಕೆಂಗೇರಿ ವರೆಗೂ ಪಾದಯಾತ್ರೆ ನಡೆಯಲಿದ್ದು, ನಂತರ ಮಾರ್ಚ್ ೧ ರಂದು ಪಾದಯಾತ್ರೆ ಬೆಂಗಳೂರು ತಲುಪಲಿದೆ.
ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ ನಡೆಯಲಿದ್ದು, ಕೆಂಗೇರಿಯಿಂದ ನಾಯ್ಡನಹಳ್ಳಿ, ಬನಶಂಕರಿ ದೇವಸ್ಥಾನ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಕೋರಮಂಗಲ, ವಿವೇಕನಗರ, ಅಲಸೂರು, ಜೆಸಿ ನಗರ, ಟಿವಿ ಟವರ್ ಮೂಲಕ ಮಾರ್ಚ್ ೨ ರಂದು ಅರಮನೆ ಮೈದಾನ ತಲುಪಿ, ಅಲ್ಲಿಯೇ ಪಾದಯಾತ್ರಿಗಳು ವಾಸ್ತವ್ಯ ಮಾಡಲಿದ್ದಾರೆ.
ಮಾರ್ಚ್ ೩ ರಂದು ಅರಮನೆ ಮೈದಾನದಿಂದ ಪಾದಯಾತ್ರೆ ಸ್ಯಾಂಕಿ ಟ್ಯಾಂಕ್, ಮಲ್ಲೇಶ್ವರ, ಶೇಷಾದ್ರಿಪುರ, ರೈಲ್ವೆ ನಿಲ್ದಾಣ, ಚಾಮರಾಜಪೇಟೆ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದ್ದು ಅಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಓದಿರಿ :-   ಪರಿಷತ್ ಚುನಾವಣೆ : ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಿದ ಜೆಡಿಎಸ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ