
ಕೈವ್: ಉಕ್ರೇನ್‌ನ (Ukraine) ಮೇಲಿನ ರಷ್ಯಾದ ಯುದ್ಧದ ನಡುವೆ ಕೈವ್‌ನಲ್ಲಿ ವಾಯುದಾಳಿ ಶೆಲ್ಟರ್ (ಬಂಕರ್)ನಲ್ಲಿ ಆಶ್ರಯ ಪಡೆದಿದ್ದ ಕುಟುಂಬವೊಂದರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಒಂದೆಡೆ ನೂರಾರು ಜನರು ಯುದ್ಧದಲ್ಲಿ ಸಾವುನೋವು ಅನೂಭವಿಸುತ್ತಿರುವ ನಡುವೆ ಪ್ರಾಣಭೀತಿಯ ನಡುವೆಯೂ ಆ ಕುಟುಂಬ ಸಂತಸದಿಂದ ಮಗುವನ್ನು ಸ್ವಾಗತಿಸಿದೆ.ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. “ಕೈವ್ನ ಶೆಲ್ಟರ್ನಲ್ಲಿ ಮೊದಲ ಮಗುವೊಂದು ಜನಿಸಿದೆ. ಸುತ್ತಲೂ ಹೊತ್ತಿ ಉರಿಯುತ್ತಿರುವ ಕಟ್ಟಡಗಳು ಮತ್ತು ರಷ್ಯಾದ ಟ್ಯಾಂಕ್‌ಗಳ ಪಕ್ಕದಲ್ಲಿ ನಾವು ಆ ಮಗುವನ್ನು ಸ್ವಾತಂತ್ರ್ಯ ಎಂದು ಕರೆಯಬಹುದು! ಎಂದು ಟ್ವೀಟ್ ಮಾಡಲಾಗಿದೆ.
ಮಗು ಮುದ್ದಾಗಿ ಮಲಗಿರುವ ಫೋಟೋವೊಂದನ್ನು ಟ್ವೀಟ್ ಜೊತೆಗೆ ಅಪ್ಲೋಡ್ ಮಾಡಲಾಗಿದೆ. ಭೂಗತ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದ 23 ವರ್ಷದ ಮಹಿಳೆಗೆ ಈ ಮಗು ಜನಿಸಿದೆ.
ಉಕ್ರೇನಿಯನ್ ಪೊಲೀಸ್ ಅಧಿಕಾರಿಗಳೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಹೆಣ್ಣು ಮಗುವಿಗೆ ಮಿಯಾ ಎಂದು ಹೆಸರಿಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ