ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಈ ಮೊದಲಿನಂತೆ ಎಲ್ಲ ಮಾರ್ಗಗಳ ಬಸ್‌ ಸಂಚಾರ ಆರಂಭ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಮೊದಲಿನಂತೆ ಎಲ್ಲ ಮಾರ್ಗಗಳನ್ನು ಪುನಃ ಪ್ರಾರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಪ್ರಯಾಣಿಕರ ಬಹುದಿನದ ಬೇಡಿಕೆಯಂತೆ ಸೀಮಿತ ನಿಲುಗಡೆ ಕಲ್ಪಿಸುವುದರೊಂದಿಗೆ 6 ಸರತಿಗಳ ಮಲ್ಟಿ ಏಕ್ಸಲ್ ವೋಲ್ವೊ ಸಾರಿಗೆ ಸೇವೆ ಮತ್ತು ಧಾರವಾಡ ಗ್ರಾಮೀಣ ಘಟಕದಿಂದ ಧಾರವಾಡ -ಕರ್ನೂಲ್ ಎಸಿ-ಸ್ಲೀಪರ್ ಸಾರಿಗೆ ಸೇವೆ ಹೊಸದಾಗಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರಸ್ತುತ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆದ್ದರಿಂದ ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಮುಂಬೈ, ಪುಣೆ, ಶಿರಡಿ, ನಾಸಿಕ್, ಕೊಲ್ಲಾಪುರ, ಇಚಲಕರಂಜಿ, ಸಾಂಗ್ಲಿ, ಮೀರಜ್, ಸೊಲ್ಲಾಪುರ ಸೇರಿದಂತೆ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳನ್ನು ಪುನಃ ಪ್ರಾರಂಭಿಸಲಾಗಿದೆ. ಮತ್ತು ದೂರದ ಮಾರ್ಗಗಳಲ್ಲಿ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳಲ್ಲಿ KSRTC mobile app www.ksrtc.in ನ್ನು ಬಳಸುವುದರ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಕೋವಿಡ್ ಪೂರ್ವದಲ್ಲಿ ಇರುವಂತೆ ಎಲ್ಲ ಸಾಮಾನ್ಯ, ವೇಗದೂತ ಮತ್ತು ಪ್ರತಿಷ್ಠಿತ ಸಾರಿಗೆಗಳನ್ನು ಪುನಃ ಪ್ರಾರಂಭಿಸಿರುವುದರಿಂದ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement